ಬೆಂಗಳೂರು: ಬೆಂಗಳೂರಿನ ಒರಿಯಾನ್ ಮಾಲ್ ನ ಪಿವಿಆರ್ ಚಿತ್ರಮಂದಿರದಲ್ಲಿ ಮಾರ್ಚ್ 1ರಿಂದ 8ರ ವರೆಗೆ ನಡೆಯಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ಗೆ ತುಳು ಭಾಷೆಯ 2 ಚಲನಚಿತ್ರಗಳು ಆಯ್ಕೆಯಾಗಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದ ಶರತ್ ಲೋಹಿತಾಶ್ವ ಅಭಿನಯದ “ಪಿದಾಯಿ” ತುಳು ಚಲನಚಿತ್ರ ಈ ಬಾರಿಯ ಬೆಂಗಳೂರು ಫಿಲಂ ಫೆಸ್ಟಿವಲ್ನಲ್ಲಿ ಚಿತ್ರಭಾರತಿ (ಭಾರತೀಯ ಚಲನಚಿತ್ರ ಸ್ಪರ್ಧಾ ವಿಭಾಗ) ಮತ್ತು ಕನ್ನಡ ಚಲನಚಿತ್ರ ಸ್ವರ್ಧಾ ವಿಭಾಗಗಳೆರಡಕ್ಕೂ ಆಯ್ಕೆಯಾಗಿದೆ.
ಅಲ್ಲದೆ ತುಳು ಚಲನಚಿತ್ರವೊಂದು ಎರಡು ಸ್ವರ್ಧಾ ವಿಭಾಗಗಳಿಗೆ ಆಯ್ಕೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ. ಅಲ್ಲದೆ ಕಳೆದ ವರ್ಷ ಡಿ.13ರಂದು ತೆರೆಕಂಡ ರಾಘವೇಂದ್ರ ಕುಡ್ವ ನಿರ್ಮಾಣದ ಅನೀಶ್ ಪೂಜಾರಿ ನಿರ್ದೇಶನದ” ಯಶಸ್ವಿ ಚಿತ್ರ ” ದಸ್ಕತ್ ” ತುಳು ಚಲನಚಿತ್ರ ಕನ್ನಡ ಚಲನಚಿತ್ರ ಸ್ವರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.ಈ ಎರಡು ಚಲನಚಿತ್ರಗಳು ಆಯ್ಕೆಯಾಗಿರುವುದು ತುಳು ಚಿತ್ರರಂಗಕ್ಕೆ ಹೆಮ್ಮೆಯ ತರುವಂತದ್ದಾಗಿದೆ.

ತನ್ನ ಮೊದಲ ನಿರ್ದೇಶನದ ” ಜೀಟಿಗೆ “ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನು ಪಡೆದ ಸಂತೋಷ್ ಮಾಡ ಇದೀಗ ತನ್ನ ಎರಡನೇ ಚಿತ್ರ ಪಿದಾಯಿ ಕೊಲ್ಕತ್ತಾ ,ಶಿಮ್ಲಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಸೇರಿ ಹಲವಾರು ಇಂಟರ್ನ್ಯಾಷನಲ್ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ನೀಡಿ ಜನ ಮೆಚ್ಚುಗೆಗಳಿಸಿದೆ.

” ಪಿದಾಯಿ ” ತುಳು ಚಲನಚಿತ್ರ
‘ನಮ್ಮ ಕನಸು’ ಬ್ಯಾನರ್ನಡಿಯಲ್ಲಿ ಕೆ. ಸುರೇಶ್ ನಿರ್ಮಾಣದ ರಮೇಶ್ ಶೆಟ್ಟಿಗಾರ್ ಚಿತ್ರಕಥೆ ಬರೆದ ಸಂತೋಷ್ ಮಾಡ ನಿರ್ದೇಶನದ ‘ ಪಿದಾಯಿ ‘ ತುಳು ಚಲನಚಿತ್ರದಲ್ಲಿ ಶರತ್ ಲೋಹಿತಾಶ್ವ ,ರೂಪ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಮೋನಿಶ್, ತ್ರಿಷ, ದ್ರುವ, ನಿಹಾ ಮುಂತಾದವರು ಅಭಿನಯಿಸಿದ್ದಾರೆ. ಉಣ್ಣಿ ಮಾಡವೂರ್ ಛಾಯಾಚಿತ್ರಗ್ರಹಣ, ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್ ಅವರ ಸಂಭಾಷಣೆ.
ಕೈತಪ್ರಮ್ ದಾಮೋದರನ್ ನಂಬೂದಿರಿ, ಸುಧೀರ್ ಅತ್ತಾವರ, ಕುಶಾಲಾಕ್ಷಿ ಕಣ್ವತೀರ್ಥ ಅವರ ಸಾಹಿತ್ಯ ಚಿತ್ರಕ್ಕಿದ್ದು, ಅಜಯ್ ನಂಬೂದಿರಿ ಸಂಗೀತ ನೀಡಿದ್ದಾರೆ. ವಿದ್ಯಾಭೂಷಣ್ ಅವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸುರೇಶ್ ಅರಸ್ ಸಂಕಲನ, ರಾಜೇಶ್ ಬಂದ್ಯೋಡು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಮುಡಿಪು ಹಾಗೂ ಮಂಜೇಶ್ವರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ

