ಕಲಬುರಗಿ (ಫೆ.25): ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಆಳಂದ ಪಟ್ಟಣದಲ್ಲಿ ಸುಪ್ರಸಿದ್ದ ಸೂಪಿ ಸಂತ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಮಾಡುವುದಕ್ಕೆ ಕಲಬುರಗಿ ಹೈಕೋರ್ಟ ಪೀಠದಿಂದ ಅನುಮತಿ ನೀಡಿ ಮಹತ್ವದ ಆದೇಶ ಹೊರಡಿಸಲಾಗಿದೆ
ನಾಳೆ ಮಹಾ ಶಿವರಾತ್ರಿಯಂದು ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಅನುಮತಿ ನೀಡುವಂತೆ ಕೋರಿ ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ, ನಾಳೆ ಶಿವಲಿಂಗದ ಪೂಜೆಗೆ ಅನುಮತಿ ನೀಡಿದೆ. ಆಳಂದ ಪಟ್ಟಣದಲ್ಲಿ ಖ್ಯಾತ ಸೂಫಿ ಸಂತ ಲಾಡ್ಲೆ ಮಶಾಕ್ ಅವರ ದರ್ಗಾ ಇದೆ.14ನೇ ಶತಮಾನದಲ್ಲಿ ತತ್ವ ವಿಚಾರಗಳಿಂದ ಲಾಡ್ಲೆ ಮಶಾಕ್ ಸುಪ್ರಸಿದ್ದಿಯನ್ನು ಹೊಂದಿದ್ದರು. ಇದೇ ದರ್ಗಾದ ಆವರಣದಲ್ಲಿ 15ನೇ ಶತಮಾನದಲ್ಲಿ ಆಗಿಹೋಗಿರುವ ಶಿವಾಜಿ ಮಹಾರಾಜರ ಗುರು, ಸಂತ ಸಮರ್ಥ ರಾಮದಾಸರ ರಾಘವ ಚೈತನ್ಯರ ಸಮಾಧಿಯಿ ಕೂಡ ಇದೆ. ಅದರ ಮೇಲೆ ಒಂದು ಶಿವಲಿಂಗ ಇದೆ. ಹೀಗಾಗಿ ಆ ಶಿವಲಿಂಗಕ್ಕೆ ಶ್ರೀ ರಾಘವ ಚೈತನ್ಯ ಶಿವಲಿಂಗ ಅಂತ ಕರೆಯಲಾಗುತ್ತದೆ.

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಶಿವರಾತ್ರಿ ಪೂಜೆಗೆ ಅನುಮತಿ ನಿರಾಕರಿಸಿದ್ದರು.ಅನುಮತಿ ನಿರಾಕರಣೆ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಸದಸ್ಯರು ಹೈಕೋಟ್೯ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸಿದ್ದಲಿಂಗ ಸ್ವಾಮಿಜಿ ಹೊರತುಪಡಿಸಿ 15 ಜನರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿ ಆದೇಶ ಹೊರಡಿಸಿದೆ. ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಒಟ್ಟು 500 ಜನರಿಗೆ ಅನುಮತಿ ಕೇಳಿದ್ದರು. ಆದರೆ, ಕೋರ್ಟ್ ಕೇವಲ 15 ಜನರಿಗೆ ಮಾತ್ರ ಅನುಮತಿ ಕೊಟ್ಟಿದೆ.

ಶಿವರಾತ್ರಿ ಹಬ್ಬದಂದೇ ಉರೂಸ್ ಇರುವ ಹಿನ್ನಲೆ ಬೆಳಗ್ಗೆ 8 ಗಂಟೆಯಿಂದ 2 ಗಂಟೆಯವರೆಗೆ ಮುಸ್ಲಿಂರಿಗೆ ಪೂಜೆಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 2 ರಿಂದ ಸಂಜೆ 6 ವರೆಗೆ ಹಿಂದುಗಳಿಗೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಗ್ರೀನ್ ಸಿಗ್ನಲ್ ನೀಡಿದೆ.


15ನೇ ಶತಮಾನದಿಂದ ಕಳೆದ 2022ನೇ ಇಸವಿಯವರೆಗೂ ಇಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಹಿಂದೂ-ಮುಸ್ಲಿಂ ನಡುವೆ ಸಾಮರಸ್ಯ ಕೂಡ ಇತ್ತು. ಆದರೆ, 2022ರಲ್ಲಿ ಶಿವಲಿಂಗದ ಮೇಲೆ ಅನ್ಯ ಕೋಮಿನ ಕಿಡಿಗೇಡಿ ಯುವಕರು ಮಲ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದರು. ಈ ವೇಳೆ ಸ್ಥಳೀಯ ಬಿಜೆಪಿ ನಾಯಕರು ಸೇರಿದಂತೆ ಹಿಂದೂ ಸಂಘಟನೆಗಳು ಶಿವಲಿಂಗ ಶುದ್ಧೀಕರಣ ಮಾಡುವುದಕ್ಕೆ ತೆರಳಿದ್ದರು. ಈ ವೇಳೆ ಅನ್ಯ ಕೋಮಿನ ಜನ ಶಿವಲಿಂಗ ಶುದ್ಧೀಕರಣ ಮಾಡಿ ಹೊರ ಬರುತ್ತಿದ್ದವರ ಮೇಲೆ ಏಕಾಏಕಿ ಮಾರಕಾಸ್ತ್ರ ಮತ್ತು ಬಡಿಗೆ ಹಿಡಿದು ಹಲ್ಲೆ ಮಾಡಿ, ಕಲ್ಲು ತೂರಾಟ ನಡೆಸಿದ್ದರು. ಅಂದಿನಿಂದ ಈ ಶಿವಲಿಂಗ ಪೂಜೆ ವಿವಾದದ ಸ್ವರೂಪ ಪಡೆದುಕೊಂಡಿದೆ.

