ಚೆನೈ : ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದೊಂದಿಗೆ ರಾಜಕೀಯಕ್ಕೆ ಪ್ರವೇಶಿಸಲು ಸಜ್ಜಾಗಿರುವ ತಮಿಳು ನಟ ವಿಜಯ್ ಶುಕ್ರವಾರ ಚೆನ್ನೈನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು.
ದಕ್ಷಿಣ ಭಾರತದ ಸೂಪರ್ಸ್ಟಾರ್ ದಳಪತಿ ವಿಜಯ್ ಶುಕ್ರವಾರ ಚೆನ್ನೈನಲ್ಲಿ ಪವಿತ್ರ ರಂಜಾನ್ ಮಾಸದ ಸಂದರ್ಭದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮವನ್ನು ಅವರ ಪಕ್ಷ ತಮಿಳಗ ವೆಟ್ರಿ ಕಳಗಂ ಆಯೋಜಿಸಿತ್ತು, ನಟ-ರಾಜಕಾರಣಿ ವಿಜಯ್ ತಲೆಗೆ ಟೋಪಿ ಧರಿಸಿ ಸಂಜೆಯ ನಮಾಜ್ನಲ್ಲಿ ಭಾಗವಹಿಸಿ, ಮುಸ್ಲಿಂ ಸಹೋದರರೊಂದಿಗೆ ಉಪವಾಸ ಮುರಿದು ಅವರೊಂದಿಗೆ ಭೋಜನ ಮಾಡಿದರು.

ಪ್ರಾರ್ಥನೆಯಲ್ಲಿ ತೊಡಗಿರುವ ಪುರುಷರ ಗುಂಪಿನ ನಡುವೆ ವಿಜಯ್ ಕುಳಿತಿರುವುದನ್ನು ಎಎನ್ಐ ಹಂಚಿಕೊಂಡಿರುವ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಎಎನ್ಐ “ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ಮತ್ತು ಮುಖ್ಯಸ್ಥ ವಿಜಯ್ ರಂಜಾನ್ ತಿಂಗಳಲ್ಲಿ ಚೆನ್ನೈನಲ್ಲಿ ‘ಇಫ್ತಾರ್’ ಆಯೋಜಿಸಿದ್ದಾರೆ” ಎಂದು ಬರೆದಿದೆ. ಧರ್ಮಗುರುಗಳು ಪ್ರಾರ್ಥನೆಗಳನ್ನು ನಡೆಸುತ್ತಿರುವಾಗ ನಟ ಗಮನವಿಟ್ಟು ಆಲಿಸುತ್ತಿರುವ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ರಾಯಪೆಟ್ಟಾದ ವೈಎಂಸಿಎ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರಿ ಜನಸ್ತೋಮ ಸೇರಿದ್ದು, ಅವರ ರಾಜಕೀಯ ಪಕ್ಷವೇ ಇದನ್ನು ಆಯೋಜಿಸಿತ್ತು ಎಂದು ವರದಿಯಾಗಿದೆ. ಚೆನ್ನೈನಾದ್ಯಂತ 15 ಮಸೀದಿಗಳ ಇಮಾಮ್ಗಳನ್ನು ಆಹ್ವಾನಿಸಲಾಗಿತ್ತು ಮತ್ತು ಸುಮಾರು 3,000 ಜನರಿಗೆ ಔತಣಕೂಟದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟುಗೂಡಿದ ಭಕ್ತರಿಗೆ ಔತಣಕೂಟ ಆಯೋಜಿಸುವ ಮೊದಲು ವಿಜಯ್ ಇಸ್ಲಾಮಿಕ್ ಪದ್ಧತಿಗಳಿಗೆ ಬದ್ಧರಾಗಿ ಇಡೀ ದಿನ ಉಪವಾಸ ವ್ರತವನ್ನು ಆಚರಿಸಿದರು.

