ಸುರತ್ಕಲ್ : ಮಕ್ಕಳಲ್ಲಿ ಕ್ಯಾನ್ಸರ್ ಕಂಡುಬಂದಲ್ಲಿ ಸೂಕ್ತವಾದ ಚಿಕಿತ್ಸೆ ನೀಡಿ ಗುಣಪಡಿಸಲು ಎಲ್ಲಾ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕರ್ಮಭೂಮಿಯಿಂದ ಜನ್ಮಭೂಮಿಗೆ ಎಂಬ ಧ್ಯೇಯವಾಕ್ಯದೊಂದಿಗೆ ಮುಂಬಯಿಯಿಂದ ಮಂಗಳೂರಿಗೆ ಕೇವಲ 23 ದಿನಗಳಲ್ಲಿ ಸುಮಾರು 950 ಕಿಲೋಮೀಟರ್ ವಿಶೇಷ ಮ್ಯಾರಥಾನ್ ಓಟವನ್ನು ರೇಷ್ಮಾ ಮತ್ತು ಗಿರೀಶ್ ಶೆಟ್ಟಿ ದಂಪತಿಗಳು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.


ಇದು ದಂಪತಿಗಳಿಂದ ನಡೆದ ಅತ್ಯಂತ ದೀರ್ಘಾವಧಿಯ ಮ್ಯಾರಥಾನ್ ಎಂದು ದಾಖಲೆಯನ್ನು ನಿರ್ಮಿಸಿದೆ. ಇವರಿಗೆ ಕುಮಾರ ಅಜ್ವಾಣಿ ಹಾಗು ಹರಿದಾಸ ನಾಯರ್ ಕೂಡ ಸಾಥ್ ನೀಡಿದ್ದಾರೆ. ಮಕ್ಕಳ ಕ್ಯಾನ್ಸರ್ ಗೆ ಚಿಕಿತ್ಸೆ ಪೂರ್ತಿ ಉಚಿತವಾಗಿದ್ದು, ರೋಗವನ್ನು ಕೂಡ ಸಂಪೂರ್ಣವಾಗಿ ಗುಣಪಡಿಸಬಹುದು ಎಂಬ ಒಳ್ಳೆಯ ಉದ್ದೇಶದಿಂದ ಹೊಸ ದಾಖಲೆಯನ್ನು ನಿರ್ಮಿಸಿದ ಅಪರೂಪದ ಸಾಧಕರನ್ನು ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ, ಸುರತ್ಕಲ್ ಪರಿಸರದಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಿದರು ಶ್ರೀ ಶಿವಶಕ್ತಿ ಸೇವಾ ಸಂಘಟನೆಯ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು ಇವರು ದಂಪತಿಯ ಮ್ಯಾರಥಾನ್ ಓಟದ ಉದ್ದೇಶ ಮತ್ತು ಹೊಸವಿಶ್ವದಾಖಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು,


ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರೋ.ಕೃಷ್ಣಮೂರ್ತಿ, ಹರೀಶ್ ಆಚಾರ್ಯ, ನೀಲಪ್ಪ ವಿ., ಡಾ.ಭಾಗ್ಯಲಕ್ಷ್ಮಿ, ಅಕ್ಷತಾ ವಿ, ಪ್ರಶಾಂತ್, ರೊ.ಎಂ ರಾಜೇಶ್ ರಾವ್, ಚಂದ್ರಕಾಂತ್ ಎಂ, ಯಶೋಮತಿ ರವೀಂದ್ರನಾಥ್, ಪ್ರೀತಂ ಜೈನ್, ವಸಂತ್ ಕುಮಾರ್ ನಾಯ್ಕ್, ಸತೀಶ್ ಸದಾನಂದ, ಜಯರಾಮ್ ಶೆಟ್ಟಿ ಮುಂಬೈ, ಹಾಗೂ ಎಂಸಿಎಫ್ ನಾಗರಿಕ ಸಲಹಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ರಾಜ್ ಮೋಹನ್ ರಾವ್ ಉಪಸ್ಥಿತರಿದ್ದರು.


