ಬೆಂಗಳೂರು: ಮದುವೆಯಾಗಲು ಹುಡುಗಿ ಸಿಗದೆ ಇರುವ ಹಿಂದೂ ಯುವಕರು ಬೇರೆ ಸಮಾಜದ ಹುಡುಗಿಯರತ್ತ ಗಮನಹರಿಸಿ ಮದುವೆಯಾಗಿ ಎಂದಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮವೊಂದರಲ್ಲಿ ” ಬೇರೆ ಸಮಾಜದವರನ್ನು ಮದುವೆಯಾಗಿ” ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನಟ ಪ್ರಕಾಶ್ ರಾಜ್ ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮದುವೆಯಾಗಲು ಹುಡುಗಿ ಸಿಗದೆ ಇರುವ ಹಿಂದೂ ಯುವಕರು ಅನ್ಯಧರ್ಮೀಯ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗಿ ಅಂತ ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದ್ದಾರೆ.
ಚಕ್ರವರ್ತಿ ವಿಡಿಯೋವನ್ನು ಹಂಚಿಕೊಂಡಿರುವ ಪ್ರಕಾಶ್ ರಾಜ್ ಅವರು, ಈ ತನಾತನಿಯ ಆಯುಧವೆಲ್ಲ ಸೊಂಟದ ಕೆಳಗೇ…. ಛಿ.. ಛೀ .. ಇಂಥಾ ವಿಕೃತ .. ಕಾಮುಕ ಢೋಂಗಿಗಳು ಯಾವ ಧರ್ಮಕ್ಕೂ ಸೇರಿದವರಲ್ಲ.ಎಚ್ಚರದಿಂದಿರಿ ಎಂದಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಭಾಷಣದಲ್ಲಿ ಏನು ಹೇಳಿದರು?
ನಾವು ಮತಾಂತರದ ಬಗ್ಗೆ ಬಹಳಷ್ಟು ಸಮಯದಿಂದ ಮಾತನಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದ ಮೊದಲಿನಿಂದಲೂ ಮಾತನಾಡುತ್ತಿದ್ದೇವೆ. ಮತಾಂತರ ನಡೆಯುತ್ತಿದೆ, ಮತಾಂತರ ನಡೆಯುತ್ತಿದೆ.. ಎಂದು ಇನ್ನೆಷ್ಟು ವರ್ಷ ಮಾತನಾಡುವುದು. ಯಾವಾಗ ಪರ್ವಕಾಲ ಬರುತ್ತದೆಯೋ ಆ ಪರ್ವ ಕಾಲದಲ್ಲಿ ಕೆಲಸ ಚಂದ ಮಾಡಬೇಕು. ಒಂದಿಷ್ಟು ಸವಾಲುಗಳನ್ನು ತೆಗೆದುಕೊಳ್ಳೋಣ. ಮತಾಂತರ ಆಗುತ್ತಿದೆ… ಮತಾಂತರ ಆಗುತ್ತಿದೆ… ಎಂದು ಎಷ್ಟು ದಿನ ಬಡಿದಾಡೋದು… ಘರ್ ವಾಪ್ಸಿ ಮಾಡೋದು ಹೇಗೆ ಎಂದು ಮನೆಮನೆಗೆ ಕಲಿಸಿಕೊಡೋಣ ನಾವು” ಎಂದು ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡಿದ್ದಾರೆ.
“ಇಲ್ಲಿ ಮತಾಂತರ ಆಗುತ್ತಿದೆ ಎಂದು ಶರಣ್ಗೆ, ನನಗೆ, ವಿಶ್ವ ಹಿಂದೂ ಪರಿಷತ್ನವರಿಗೆ ಕಾಲ್ ಮಾಡಬೇಡಿ. ನಾವು ನಮ್ಮ ಜನರನ್ನು ಹೇಗೆ ಟ್ರೈನ್ ಮಾಡೋಣ ಎಂದರೆ… ನಮ್ಮವರು ಯಾರಾದರೂ ಮತಾಂತರವಾದರೆ ಆ ಮತಾಂತರ ಗೊಂಡವರನ್ನು ಕರೆದುಕೊಂಡು ಬಂದು, ಕೊರಗಜ್ಜನ ಮುಂದೆ ನಿಲ್ಲಿಸೋಣ. ಕೊರಗಜ್ಜನ ಮುಂದೆ ನಾನು ತಪ್ಪು ಮಾಡಿದ್ದೇನೆ, ಇನ್ನು ನಾನು ಬೇರೆ ಧರ್ಮಕ್ಕೆ ಹೋಗೋದಿಲ್ಲ ಎಂದು ಕೇಳಿಕೊಂಡರೆ ಮುಗೀತು. ಒಂದು ರೀಲ್ಸ್ ಮಾಡಿ. ಮತಾಂತರಗೊಂಡವರು ಘರ್ ವಾಪ್ಸಿ ಮಾಡೋದು ಹೇಗೆ ಎಂದು ಒಂದು ರೀಲ್ಸ್ ಮಾಡಿ. ಮತಾಂತರದ ಬಗ್ಗೆ ಎಷ್ಟು ಮಾತನಾಡೋದು, ಇನ್ನು ಮನೆಮನೆಯಲ್ಲೂ ಘರ್ ವಾಪ್ಸಿ ಬಗ್ಗೆ ಮಾತನಾಡಬೇಕು” ಎಂದು ಭಾಷಣ ಮಾಡಿದ್ದಾರೆ.

“ಎಲ್ಲಿಯವರೆಗೆ ಲವ್ ಜಿಹಾದ್ ಬಗ್ಗೆ ಮಾತನಾಡೋಣ. ಸ್ವಲ್ಪ ಬದಲಾವಣೆ ತರೋಣ. ನಮ್ಮ ಮಕ್ಕಳಿಗೂ ಹೇಳೋಣ. ನಮ್ಮ ಗಂಡು ಮಕ್ಕಳಿಗೂ ಹೇಳೋಣ. ಎಷ್ಟು ದಿನ ಅಂತ ನಮ್ಮದೇ ಹೆಣ್ಣು ಮಕ್ಕಳನ್ನು ನೋಡ್ತಿಯಪ್ಪ… ಹುಡುಗಿ ಸಿಕ್ಕಿಲ್ಲ ಅಂತ ಎಷ್ಟು ದಿನ ಹೇಳ್ತಿಯಾ.. ಬೇರೆ ಹುಡುಗಿಯರನ್ನ ನೋಡ್ರಲ್ಲ. ನಾವು ನಮ್ಮ ಸಮಾಜದ ಗಂಡು ಮಕ್ಕಳಿಗೆ ಹೆಣ್ಣು ಸಿಗ್ತಾ ಇಲ್ಲ ಎಂದು ಯೋಚನೆ ಮಾಡುತ್ತಿರುವಾಗ… ಪಕ್ಕದ ಸಮಾಜದಲ್ಲಿಯೂ ಸಮಸ್ಯೆಗಳು ಇವೆಯಲ್ವ…ಧೈರ್ಯ ತುಂಬ್ರಲ್ಲ… ನಾವು ಈ ಸವಾಲುಗಳನ್ನು ಎದುರಿಸಬೇಕಿದ್ರೆ ಅಗ್ರೆಸಿವ್ ಮಾರ್ಗದಲ್ಲಿ ಹೋಗಬೇಕೆ ಹೊರತು ಇನ್ನು ನಾವು ಡಿಫೆನ್ಸ್ನಲ್ಲಿ ಆಡಿದ್ರೆ ಆಗೋದಿಲ್ಲ” ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿಕೆ ನೀಡಿದ್ದಾರೆ.

