ಮಂಗಳೂರು : ಮಂಗಳೂರಲ್ಲಿ ವರ್ಷದ ಮೊದಲ ಮಳೆಯ ಸಿಂಚನವಾಗಿದೆ.ರಾತ್ರಿಯಿಂದ ನಗರದಲ್ಲಿ ಗುಡುಗು ಸಹಿತ ಮಳೆಯಾಗಿದೆ.
ಬಿಸಿಲ ಬೇಗೆಯಿಂದ ಬೆಂದು ಹೋಗಿದ್ದ ನಗರವಾಸಿಗಳಿಗೆ ಮಳೆಯ ಸ್ಪರ್ಶ ತಂಪು ನೀಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ ನಗರದಾದ್ಯಂತ ಮಳೆ ಸುರಿದಿದೆ.
ಅಲ್ಲದೆ ನಗರದಾದ್ಯಂತ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮಳೆ ನೀರು ಸಮರ್ಪಕವಾಗಿ ಹರಿಯದೆ ರಸ್ತೆಯಲ್ಲೇ ನೀರು ನಿಂತು ಪ್ರಯಾಣಿಕರಿಗೆ ಬಾರಿ ತೊಂದರೆಯಾಗಿದೆ.

ಮಂಗಳೂರು ನಗರ ಸೇರಿದಂತೆ ನಗರ ಹೊರವಲಯದ ಕೈಕಂಬ, ಗುರುಪುರ,ವಾಮಂಜೂರು, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕುಳಾಯಿ, ಪಣಂಬೂರು ಸುರತ್ಕಲ್ ಭಾಗದಲ್ಲಿ ಮಳೆ ಸುರಿದಿದೆ.ರಾತ್ರಿ ಸುರಿದ ಮಳೆಗೆ ಇಳೆ ತಂಪಾದರೂ ಜನರು ಕಿರಿಕಿರಿ ಅನುಭವಿಸಿದ್ದಾರೆ.
ತಾಲೂಕಿನಾದ್ಯಂತ ಹಲವಾರು ಕಡೆಗಳಲ್ಲಿ ಜಾತ್ರೆ, ಯಕ್ಷಗಾನ, ನಾಟಕ ಪ್ರದರ್ಶನ ಸೇರಿದಂತೆ ಅರಸು ಕುಂಜರಾಯ ದೈವಸ್ಥಾನ,ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ, ಶಿಮಂತೂರು ದೇವಸ್ಥಾನ ಜಾತ್ರೆಗಳಿಗೆ ಗುಡುಗು ಸಹಿತ ಮಳೆಯಿಂದಾಗಿ ಭಾರೀ ಅಡಚಣೆಯಾಗಿದೆ.
ಅಲ್ಲದೆ ಮುಲ್ಕಿ, ಬೆಳ್ತಂಗಡಿ, ಬಂಟ್ವಾಳ ತಾಲ್ಲೂಕಿನಾದ್ಯಂತ ಮಳೆಯಿಂದಾಗಿ ಅನೇಕ ನಷ್ಟ ಸಂಭವಿಸಿದೆ. ಪುತ್ತೂರು, ಕಡಬ, ಉಪ್ಪಿನಂಗಡಿ.ಸುಳ್ಯ,ಸುಬ್ರಮಣ್ಯ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸುರಿದ ಮಳೆಗೆ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿದೆ.

