ಕುಂದಾಪುರ : ವಿದ್ಯಾರ್ಥಿಯೊಬ್ಬ ದೈವಕ್ಕೆ ಪತ್ರ ಬರೆದು ನನ್ನನ್ನು ಜಸ್ಟ್ ಪಾಸ್ ಮಾಡು ಸಾಕು ಎಂದು ಮನವಿ ಮಾಡಿದ ಅಪರೂಪದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯ ಹಣ ಲೆಕ್ಕಾಚಾರ ಮಾಡುವ ಸಂದರ್ಭ ಈ ಪತ್ರ ಸಿಕ್ಕಿದೆ. ಸಾಮಾನ್ಯವಾಗಿ ಪರೀಕ್ಷೆ ಬಂದಾಗ ಡಿಸ್ಟಿಂಕ್ಷನ್ ಪಾಸ್ ಆಗಲಿ, ಫಸ್ಟ್ ಕ್ಲಾಸ್ ಬರಲಿ ಅಂತ ದೈವ-ದೇವರ ಬಳಿ ಹೋಗಿ ಬೇಡಿಕೊಳ್ಳೋದು, ಹರಕೆ ಕಟ್ಟಿಕೊಳ್ಳುವುದು,ವ್ರತಾಚರಣೆ ಮಾಡುವುದು ಸಾಮಾನ್ಯ ಆದರೆ ಇಲ್ಲೊಬ್ಬ ವಿದ್ಯಾರ್ಥಿ ಡಿಸ್ಟಿಂಕ್ಷನ್ ಅಲ್ಲ ಜಸ್ಟ್ ಪಾಸ್ಗಾಗಿ ದೈವದ ಮೊರೆ ಹೋಗಿದ್ದಾನೆ. ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಚೀಟಿ ಬರೆದು ತನಗೆ ಇಂತಿಷ್ಟು ಅಂಕ ಬರಬೇಕೆಂದು ತನ್ನ ಬೇಡಿಕೆಯನ್ನು ದೈವಕ್ಕೆ ಸಲ್ಲಿಸಿದ್ದಾನೆ. ಸದ್ಯ ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ವೇಳೆ ಈ ಚೀಟಿ ಲಭ್ಯವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಿದೆ.

ಇನ್ನು ಹುಂಡಿಯಲ್ಲಿ ಸಿಕ್ಕ ಈ ಚೀಟಿ ಫೋಟೋವನ್ನು Namma Kundapura ಎಂಬ ಫೇಸ್ಬುಕ್ ಪೇಜ್ ಒಂದರಲ್ಲಿ ಶೇರ್ ಮಾಡಲಾಗಿದೆ. ಈ ಚೀಟಿಯಲ್ಲಿ “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಬರಬೇಕು ದೇವರೇ ಹೋರ್ ಬೊಬ್ಬರ್ಯ, ಗಣಿತ- 39, 38, 37, 36, ಇಂಗ್ಲೀಷ್- 39, 38, 37, ಕನ್ನಡ- 40, 39 ವಿಜ್ಞಾನ- 39, 38, ಹಿಂದಿ- 40, 39, ಸಮಾಜ ವಿಜ್ಞಾನ- 38, 37 ಮತ್ತೆ ಇದಕ್ಕಿಂತ ಕಡಿಮೆ ಅಂಕ ಬೇಡ ದೇವರೆ ಹೋರ್ ಬೊಬ್ಬರ್ಯ” ಎಂದು ಕೇಳಿಕೊಂಡಿದ್ದಾನೆ

