ಸುರತ್ಕಲ್ : ಶ್ರೀಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಎಪ್ರಿಲ್ 18 ರಿಂದ 26 ರವರೆಗೆ ಕ್ಷೇತ್ರದಲ್ಲಿ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕ, ಬ್ರಹ್ಮರಥೋತ್ಸವ, ನಾಗಮಂಡಲ, ಭಜನಾ ಸಂಭ್ರಮೋತ್ಸವ ಹಾಗೂ ಕ್ಷೇತ್ರದ ಜಾರಂದಾಯ ದೈವದ ನೇಮೋತ್ಸವ ಅಲ್ಲದೆ ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳು ಬಹಳ ವಿಜ್ರಂಭಣೆಯಿಂದ ಜರಗಲಿದೆ ಎಂದು ಕ್ಷೇತ್ರದ ಅಧ್ಯಕ್ಷರಾದ ಧರ್ಮೇಂದ್ರ ಗಣೇಶಪುರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

1960ರ ದಶಕದಲ್ಲಿ ತುಳುನಾಡಿನ ಪಾರಂಪರಿಕ ಪಟ್ಟಣವಾಗಿದ್ದ ಪಣಂಬೂರು ಪ್ರದೇಶವು ದೇಶದ ಅಗತ್ಯಕ್ಕಾಗಿ ನವಮಂಗಳೂರು ಆಗಿ ಪರಿವರ್ತನೆ ಗೊಂಡಿತು, ಈ ಪ್ರದೇಶದಲ್ಲಿನ ಹಲವಾರು ದೇವಸ್ಥಾನದ, ದೈವಸ್ಥಾನ, ಮಂದಿರಗಳು ನೆಲೆ ಕಳೆದುಕೊಂಡವು. ಆನರು ಕಾಟಿಪಳ್ಳ ಎಂಬ ಕಾಡು ಪ್ರದೇಶಕ್ಕೆ ನಿರ್ವಸಿತರಾಗಿ ಬಂದರು. ಜನರ ಧಾರ್ಮಿಕ ಭಾವನೆ ನಲುಗಿ ಹೋಯಿತು. 1988ನೇ ಇಸವಿಯಲ್ಲಿ ಪುನರ್ ನಿರ್ವಹಿತ ಕಾಟಿಪಳ್ಳ ಕೈಕಂಬ ಪ್ರದೇಶದಲ್ಲಿ ಸರಕಾರದಿಂದ ಮಂಜೂರಾದ ಜಮೀನಿನಲ್ಲಿ ಕಾಟಿಪಳ್ಳ,ಕ್ರಷ್ಣಪುರ,ಬಾಳ, ಕುತ್ತೆತ್ತೂರು, ಕಾನ,ಕಟ್ಲ,ಸೂರಿಂಜೆ, ಮಧ್ಯ ಇತ್ಯಾದಿ ಪರಿಸರದ ಗ್ರಾಮಸ್ಥರು ಸೇರಿಕೊಂಡು ಶ್ರೀ ಮಹಾಗಣಪತಿ ದೇವಸ್ಥಾನವನ್ನು ನಿರ್ಮಿಸಿದರು. ಬಲಮುರಿ ಶ್ರೀ ಮಹಾಗಣಪತಿ ದೇವರು ನೆಲೆಯಾದ ಪುಣ್ಯ ಪ್ರದೇಶಕ್ಕೆ ಯತಿಶ್ರೇಷ್ಠರಾದ ಪೇಜಾವರ ಮಠಾಧೀಶರಾದ ವಿಶ್ವೇಶ್ವತೀರ್ಥ ಶ್ರೀಪಾದರು ಶ್ರೀ ಕ್ಷೇತ್ರ ಗಣೇಶಪುರ ಎಂಬ ನಾಮಕರಣವನ್ನು ಮಾಡಿದರು.

ಕೇವಲ ಮೂರು ದಶಕಗಳ ಅವಧಿಯಲ್ಲಿ ಶ್ರೀಕ್ಷೇತ್ರ ಗಣೇಶಪುರವು ದೇಶದ ಇತಿಹಾಸದಲ್ಲೇ ಪ್ರಥಮ ಎಂಬಂತೆ ಹಿಂದೂ ಧಾಮಿಕ ದತ್ತಿ ಇಲಾಖೆಯ “A ಗ್ರೇಡ್ ದೇವಳವನ್ನಾಗಿ ಪರಿವರ್ತಿಸುವ ಕಾರಣಿಕವನ್ನು ಶ್ರೀ ಮಹಾಗಣಪತಿ ದೇವರು ಪ್ರದರ್ಶಿಸಿದ್ದಾರೆ. ಭಕ್ತರ ಇಷ್ಟಾರ್ಥವನ್ನು ಪೂರೈಸುವ ಕ್ಷಿಪ್ರ ಪ್ರಸಾದ ಪ್ರಧಾನ ಮಾಡುವ ದೇವರಾಗಿ ಇಲ್ಲಿ ಮೆರೆಯುತ್ತಿದ್ದಾರೆ.

ಗಣೇಶಪುರ ದೇವಳದಲ್ಲಿ 2004ನೇ ಇಸವಿಯ ಏಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ಮತ್ತು ಕರ್ನಾಟಕ ರಾಜ್ಯದಲ್ಲೇ ಪ್ರಥಮ ಎಂಬಂತೆ ಮೂಡಪ್ಪ ಸೇವೆಯು ನಡೆದಿತ್ತು. 2010 ಏಪ್ರಿಲ್ ತಿಂಗಳಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದ ಏರ್ಪಾಡು ನಡೆದಿತ್ತು. ಆದರೆ ವಿಶ್ವವನ್ನು ಕಾಡಿದ ಕೊರೋನ ಮಾರಿಯಿಂದಾಗಿ ಕಾರ್ಯಕ್ರಮವು ರದ್ದಾಗಿತ್ತು. ಆದರೆ ಶ್ರೀ ಮಹಾಗಣಪತಿ ದೇವಳವು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರವಾಗಿ ಅಷ್ಟಬಂಧ ನಡೆದು ಪುನರ್ ಪ್ರತಿಷ್ಠೆಯನ್ನು ಸರಳವಾಗಿ ಮಾಡಲಾಗಿತ್ತು. ಬ್ರಹ್ಮಕಲಶೋತ್ಸವವನ್ನು ಕೋವಿಡ್ ನಿಯಮಾವಳಿಯ ಕಾರಣದಿಂದ ಮುಂದೂಡಲಾಗಿತ್ತು, ಅಂದು ವಿರಾಟ್ ಭಜನೋತ್ಸವ, ನಾಗಮಂಡಲೋತ್ಸವ,ಮತ್ತು ಪರಿವಾರ ದೈವವಾದ ಜಾರಂದಾಯ ದೈವಕ್ಕೆ ನೇಮೋತ್ದವ ಮಾಡುವ ಸಂಕಲ್ಪ ಮಾಡಲಾಗಿತ್ತು.ಆದರೆ ಕೊರೊನಾ ಕಾರಣದಿಂದ ಸಾಧ್ಯವಾಗಿರಲಿಲ್ಲ ಈಗ ಈ ದೇವಳದಲ್ಲಿ ಎಪ್ರಿಲ್ 18ರಿಂದ 26ರ ವರೆಗೆ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ.2018 ನೇ ಇಸವಿಯಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆದ ಆರೂಢ ಪ್ರಶ್ನೆಯಲ್ಲಿ ಕ್ಷೇತ್ರಕ್ಕೆ ಬ್ರಹ್ಮರಥದ ಸಮರ್ಪಣೆಯಾಗಬೇಕು ಎಂಬ ಅಪೇಕ್ಷೆ ಮತ್ತು ಕ್ಷೇತ್ರದ ಜಿರ್ಣೋದ್ದಾರಕ್ಕೆ ದೈವದ ಅನುಗ್ರಹ ಕಂಡು ಬಂದಿತು.

ಅಂದು ಆರ್ಥಿಕ ಹಿನ್ನೆಡೆಯ ಕಾರಣದಿಂದ ಬ್ರಹ್ಮರಥ ಸಮರ್ಪಣೆಗೆ ತೊಡಕಾಗಿತ್ತು. ಶ್ರೀ ಮಹಾಗಣಪತಿ ದೇವರ ಇಚ್ಚೆಯಂತೆ ಈ ಬಾರಿ ಬ್ರಹ್ಮರಥದೊಂದಿಗೆ ಸಹಸ್ರ ಕುಂಭ ಕಲಶಾಭಿಷೇಕ ಮಾಡುವ ಪುಣ್ಯ ನಮ್ಮದು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮರಥವು ಮೂಡುಬಿದ್ರೆ ನಾರಾಯಣ ಆಚಾರ್ಯರ ಪುತ್ರ ಹರೀಶ್ ಆಚಾರ್ಯರ ನೇತೃತ್ವದಲ್ಲಿ ಸಂಪಿಗೆಯಲ್ಲಿ ಬ್ರಹ್ಮರಥದ ನಿರ್ಮಾಣವಾಗುತ್ತಿದ್ದು ಅದು ಎಪ್ರಿಲ್ 12ರಂದು ಭವ್ಯ ಮೆರವಣಿಗೆಯ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸಲಿದೆ. ದೇವಳದ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ಶ್ರೀ ಜಾರಂದಾಯ ದೈವದ ಭೇಟಿ ಕಾರ್ಯಕ್ರಮವು ನಡೆಯುತ್ತಿದೆ. ಶ್ರೀ ಮಹಾಗಣಪತಿ ದೇವರ ವಚನದ ಪ್ರಕಾರ ಈ ಭಾರಿ ದೇವಸ್ಥಾನದ ಪರಿಸರದಲ್ಲಿ ಹಾಕಲಾಗುವ ಕೊಡಿಅಡಿಯಲ್ಲಿ ಜಾರಂದಾಯ ದೈವದ ನೇಮೋತ್ಸವವು ನಡೆಯಲಿದೆ. ಈ ಸೇವೆಯು ಈ ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು ಮುಂದಿನ ದಿನಗಳಲ್ಲಿ ಆಯಾಯ ಸಂದರ್ಭದ ವ್ಯವಸ್ಥೆಗೆ ಸಂಬಂಧಿಸಿದವರ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ.

ಶ್ರೀ ಕ್ಷೇತ್ರದಲ್ಲಿ ಉಮಾಮಹೇಶ್ವರಿ, ದುರ್ಗಾಪರಮೇಶ್ವರಿ, ನವಗ್ರಹ, ನಾಗ ಮತ್ತು ಚಾಮುಂಡಿ ದೈವದ ಸಾನಿಧ್ಯವಿದೆ, ಪ್ರತಿ ತಿಂಗಳ ಸಂಕಷ್ಟಹರ ಕಾರ್ಯಕ್ರಮವು ಅನ್ನಸಂತರ್ಪಣೆಯೊಂದಿಗೆ ಜರಗುತ್ತಿದೆ.ಅಂಗಾರಕ ಸಂಕಷ್ಟಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರತಿ ಹುಣ್ಣಿಮೆಯಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಜರಗುತ್ತಿದೆ. ನವರಾತ್ರಿ ಸಂದರ್ಭದಲ್ಲಿ ಹತ್ತು ದಿನಗಳ ಸೇವಾ ಯಕ್ಷಗಾನ ಬಯಲಾಟ ನಡೆಯುತ್ತಿದೆ. ಶ್ರೀ ಚಕ್ರಪೂಜೆ, ದೀಪೋತ್ಸವ, ಚೌತಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಕೊರಳು ವಿತರಿಸಿ ತೆನೆ ಹಬ್ಬ ಆಚರಿಸಲಾಗುತ್ತಿದೆ. ದೇವಳದ ಪರಿಸರದ ಹತ್ತು ಸಹಕ್ಕೂ ಹೆಚ್ಚು ಮಂದಿ ಶ್ರದ್ಧಾಭಕ್ತಿಯಿಂದ ದೇವಳದಿಂದ ತೆಗೆ ಪಡೆದು ತಮ್ಮ ತಮ್ಮ ಮನೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್, ಕ್ಷೇತ್ರದ ಅರ್ಚಕ ಸುನೀಲ್ ಭಟ್, ಯಾದವ ಕೋಟ್ಯಾನ್, ಪ್ರಶಾಂತ್ ಮುಡಾಯಿಕೋಡಿ, ನಿರಂಜನ ಹೊಳ್ಳ ಉಪಸ್ಥಿತರಿದ್ದರು.
ಚಿತ್ರ : ಸತೀಶ್ ಕಾಪಿಕಾಡ್

