ಮಂಗಳೂರು : ಕಣ್ಣಗುಡ್ಡ ನೂಜಿ ಸರಿಪಲ್ಲ ಹೈವೇ ಕ್ರಾಸಿಂಗ್ ಕಾಮಗಾರಿ ಇನ್ನೂ ಅಪೂರ್ಣಗೊಂಡಿದ್ದು ಚುನಾವಣೆ ವೇಳೆ ತ್ವರಿತಗತಿಯಲ್ಲಿ ಸಾಗುತ್ತಿದ್ದ ರಸ್ತೆ ಕಾಮಗಾರಿ ಬಳಿಕ ಅರ್ಧಕ್ಕೆ ನಿಂತಿದೆ. ರಸ್ತೆ ಅಗೆದು ಜಲ್ಲಿ ಹಾಕಿಸಿ ಹೋದ ಗುತ್ತಿಗೆದಾರ ನಂತರ ಈ ಕಡೆ ತಿರುಗಿ ನೋಡಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಗುತ್ತಿಗೆದಾರನಿಗೆ, ಇಂಜಿನಿಯರ್ಗೆ ಫೋನ್ ಮಾಡಿದರೆ ಸ್ವೀಕರಿಸುತ್ತಿಲ್ಲ, ಇದರಿಂದ ಇಲ್ಲಿನ ನಿವಾಸಿಗಳಿಗೆ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ, ಈ ರಸ್ತೆಯಲ್ಲಿ ಯಾವುದಾದರೂ ದೊಡ್ಡ ವಾಹನ ಬಂದರೆ ಜನಸಾಮಾನ್ಯರೂ ಪಕ್ಕದ ಚರಂಡಿಗೆ ಇಳಿದು ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳು ಇಲ್ಲಿ ಸಂಚರಿಸುವುದೇ ಒಂದು ದೊಡ್ಡ ಸವಾಲಾಗಿದೆ. ಬೈಕ್ ಸವಾರರು ಸ್ವಲ್ಪ ನಿರ್ಲಕ್ಷ್ಯವಹಿಸಿದರೆ ಆಸ್ಪತ್ರೆ ದಾಖಲಾಗುವುದು ಪಕ್ಕಾ ಎನ್ನುವಂತಿದೆ.ರಸ್ತೆಗಳ ಮಣ್ಣು ಅಗೆದ ಪರಿಣಾಮ ಅಲ್ಲಲ್ಲಿ ಗುಂಡಿಗಳಾಗಿದ್ದು.ರಸ್ತೆಯಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಯಲ್ಲಿಯೇ ರಸ್ತೆಗಳಿವೆಯೋ ಎನ್ನುವ ಅನುಮಾನ ಜನರನ್ನು ಕಾಡುತ್ತದೆ. ಪ್ರತಿನಿತ್ಯ ಈ ದಾರಿಯಲ್ಲಿ ನೂರಾರು ವಾಹನಗಳು ಸಂಚಾರ ನಡೆಸುತ್ತವೆ,ಆದರೂ ರಸ್ತೆ ಕಾಮಗಾರಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲಕರ ವಾದಂತಿಲ್ಲ. ಕಾಮಗಾರಿ ಆರಂಭವಾದರೂ ಸಹ ಇನ್ನೂ ಪೂರ್ಣಗೊಂಡಿಲ್ಲ. ಜನರು ವಾಹನ ಬಿಟ್ಟು ವಿಮಾನದಲ್ಲಿ ಸಂಚಾರ ನಡೆಸಬೇಕೆ? ಎಂದು ಜನರು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಚಿವರುಗಳು ದಯಮಾಡಿ ಆ ರಸ್ತೆಯಲ್ಲಿ ತಮ್ಮ ವಾಹನದಲ್ಲಿ ಒಮ್ಮೆ ಸಂಚಾರ ನಡೆಸಿ ರಸ್ತೆಯನ್ನು ನೋಡಿ ಬರಲಿ. ರಸ್ತೆ ಬಳಕೆ ಮಾಡುವವರ ಕಷ್ಟ ಆಗಲಾದರೂ ಇವರಿಗೆ ಅರ್ಥ ಆಗಬಹುದು. ಎಷ್ಟೋ ಬಾರಿ ಮನವಿ ಮಢಿದರೂ ಸ್ವಂದಿಸದ ಜನಪ್ರತಿನಿದಿಗಳು ರಸ್ತೆ ಅವ್ಯವಸ್ಥೆ ಬಗ್ಗೆ ಏಕೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ಈಗ ಬಾಕಿ ಇರುವ ಕಾಮಗಾರಿಗಳನ್ನು ಯಾವಾಗ ಪೂರ್ಣ ಮಾಡುತ್ತೀರಿ ? ಹೊಸ ರಸ್ತೆ ನಿರ್ಮಾಣ ಮಾಡುವ ಬದಲು ಈಗಿರುವ ರಸ್ತೆಯನ್ನು ವಾಹನ ಸವಾರರಿಗೆ ಅನುಕೂಲವಾಗುವಂತೆ ಮಾಡಿಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು ತಾವೇ ರಸ್ತೆ ದುರಸ್ಥಿಗೆ ಮುಂದಾಗಬೇಕೋ ಇಲ್ಲ,ಇಲ್ಲಿನ ಶಾಸಕರಾಗಲೀ, ಅಥವಾ ಅಧಿಕಾರಿಗಳಾಗಲೀ ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡ್ಬೇಕಿದೆ ಎಂದು ಕಾಯುತ್ತಿದ್ದಾರೆ.ಇನ್ನಾದರೂ ಸರಕಾರ ಹಾಗೂ ಮುಖ್ಯ ಜನಪ್ರತಿನಿಧಿಗಳು ರಸ್ತೆ ಕಾಮಗಾರಿ ಪೂರ್ಣಗೊಳ್ಳುವಂತೆ ಸಹಕರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಮತ ಜಾತಿ ಭೇದ ಪಕ್ಷ ಸಂಘಟನೆ ರಾಜಕೀಯ ಮಾಡದೆ ಈ ಕಾಮಗಾರಿಯ ಪ್ರಗತಿಗೆ ನಿಷ್ಪಕ್ಷಪಾತವಾಗಿ ಸಹಕರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.

