ದುಬೈ: ಯುಎಇ ನಲ್ಲಿ ಕಳೆದ ಮೂರು ದಶಕಗಳಿಂದ ಕರ್ನಾಟಕ ಸಂಘಟನೆಗಳ ಪರ ಕ್ರೀಡಾ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಿಕೊಂಡು ಬಂದಿರುವ ಉತ್ತಮ ಕ್ರೀಡಾ ಸಂಘಟಕರಾದ ನೊಯಲ್ ಡಿ.ಅಲ್ಮೆಡಾ ಅವರಿಗೆ ಕನ್ನಡ ಸಂಘ ಅಲೈನ್ ವತಿಯಿಂದ “ಗಲ್ಫ್ ಕ್ರೀಡಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳೆದ ಎರಡು ದಶಕಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ಯಶಸ್ವಿಯಾಗಿ ಆಯೋಜಿಸಿ ಕೊಂಡು ಬಂದಿರುವ ಕರ್ನಾಟಕ ಸಂಘಟನೆಗಳ ಪೈಕಿ ಕನ್ನಡ ಸಂಘ ಅಲೈನ್ ಕೂಡ ಒಂದು. ಇದರ 22ನೇ ವಾರ್ಷಿಕೋತ್ಸವದ ಅಂಗವಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಇತ್ತೀಚೆಗೆ ಅಲೈನ್ ನ ರಾಡಿಸ್ಸನ್ ಬ್ಲೂ ಹೋಟೆಲ್ ನಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದ ಸಂಘಟನೆಯಲ್ಲಿ ಅತ್ಯುತ್ತಮ ಸೇವೆಗೈದ ನೊಯಲ್ ಡಿ.ಅಲ್ಮೇಡಾ ಅವರಿಗೆ “ಗಲ್ಫ್ ಕ್ರೀಡಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯು.ಎ.ಇ. ಹಿರಿಯ ಉದ್ಯಮಿ ಡಾ. ಬಿ.ಆರ್. ಶೆಟ್ಟಿ, ಗೌರವ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಮತ್ತು ಅಲೈನ್ ಜೂನಿಯರ್ ಸ್ಕೂಲ್ ನ ಮುಖ್ಯಸ್ಥರಾದ ಅರ್ಶದ್ ಶರೀಫ್,ಬಿನ್ ಡಾರ್ವಿಶ್ ಗ್ರೂಪ್ ನ ಮುಖ್ಯಸ್ಥರಾದ ಮಹ್ಮದ್ ಇಬ್ರಾಹಿಂ, ಐ.ಎಸ್.ಸಿ. ಅಲೈನ್ ಅಧ್ಯಕ್ಷ ರಸ್ಸೆಲ್, ಕರ್ನಾಟಕ ಸಂಘದ ಶಾರ್ಜಾದ ಅಧ್ಯಕ್ಷ ಸತೀಶ್ ಪೂಜಾರಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈ ಘಟಕದ ಸಲಹೆಗಾರರಾದ ಸುಂದರರಾಜ್ ಬೇಕಲ್ , ಅಲೈನ್ ಕನ್ನಡ ಸಂಘದ ಮುಖ್ಯ ಸಂಘಟಕರಾಗಿರುವ ವಿಮಲ್ ಕುಮಾರ್,ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರಮೇಶ್ ಕುಮಾರ್, ಡಾ.ಪ್ರದೀಪ್, ದೇವಿಪ್ರಸಾದ್ ಶೆಟ್ಟಿ,ವಿಕಾಸ್ ಶೆಟ್ಟಿ, ವಿನೋದ್ ಮಥಾಯಸ್, ನಿತೀನ್, ಶ್ರೀಧರ್, ಶ್ರೀಮತಿ ದಿವ್ಯ ಶಶಿ, ಶಿಲ್ಪಾ ನಂಜುಂಡಸ್ವಾಮಿ,ಸಮೀನಾ ಫಾರುಕ್,ಡಾ.ದಿವ್ಯತಾ ಮೊದಲಾದವರು ಉಪಸ್ಥಿತರಿದ್ದರು.

ನೊಯಲ್ ಡಿ.ಅಲ್ಮೆಡಾರವರ ಕಿರುಪರಿಚಯ
1986 ನೇ ಇಸವಿಯಲ್ಲಿ ಉದ್ಯೋಗ ನಿಮಿತ್ತ ಯುಎಇ ನಗರಕ್ಕೆ ಬಂದ ನೊಯಲ್ ಡಿ.ಅಲ್ಮೆಡಾರವರು ತನ್ನ ವೃತ್ತಿಯೊಂದಿಗೆ ತನ್ನ ಪ್ರವೃತ್ತಿಯಾದ ಕ್ರೀಡಾ ಸಂಘಟನೆಯ ಮೂಲಕ ಹೆಸರುವಾಸಿಯಾದರು.ಯುಎಇಯಲ್ಲಿ ಹಲವಾರು ತುಳು, ಕನ್ನಡ,ಕೊಂಕಣಿ ಸಂಘ ಸಂಸ್ಥೆಗಳಲ್ಲಿ ದುಡಿದ ಇವರು ತುಳು ಕೂಟ ದುಬೈ, ಕರ್ನಾಟಕ ಸಂಘ ಶಾರ್ಜಾ,ಮಂಗಳೂರು ಕೊಂಕಣ್ಸ್,ಡೈಜಿ ರಂಗಮಂದಿರ್, ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸ್ಥಾಪಕ ಸದಸ್ಯರು.ಯುಎಇಯ ಎಲ್ಲಾ ತುಳು ಕನ್ನಡ ಸಂಘ ಸಂಸ್ಥೆಗಳ ಕಾರ್ಯಕ್ರಮದ ಯಶಸ್ವಿಗೆ ದುಡಿದ ಇವರು ಕರ್ನಾಟಕ ಸಂಘ ದುಬೈ, ಸಂಗಮ ಕಲಾವಿದರು ದುಬೈ ಸಂಘಟನೆಗಳ ಮೂಲಕ ಹಲವಾರು ಕಾರ್ಯಕ್ರಮವನ್ನು ನೀಡಿದ್ದಾರೆ. ಇಂಡಿಯನ್ ಕಬಡ್ಡಿ ಆರ್ಗನೈಸರ್ ಸಂಸ್ಥೆಯ 2023-24 ಸಾಲಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತವರೂರಿನ ನಾಟಕ ಸಂಸ್ಥೆಯಾದ ವಿಜಯಕುಮಾರ್ ಕೋಡಿಯಲ್ ಬೈಲ್ ರವರ ಕಲಾ ಸಂಗಮ ತಂಡದ ಇಪ್ಪತೈದಕ್ಕೂ ಅಧಿಕ ಕಲಾವಿದರನ್ನು ದುಬೈಗೆ ಕರೆಸಿ ಮದಿಮೆ ಎಂಬ ನಾಟಕವನ್ನು ಆಡಿಸಿದ ಹೆಮ್ಮೆ ಇವರದಾಗಿದೆ.ಯುಎಇಯಲ್ಲಿ ತಮ್ಮದೆ ಆದ ನ್ಯೂ ಮಾರ್ಕ್ ಎಂಬ ಕಬಡ್ಡಿ ತಂಡವನ್ನು ಸ್ಥಾಪಿಸಿ ಹಲವಾರು ಕಬಡ್ಡಿ ಆಟಗಾರರಿಗೆ ಅವಕಾಶ ಒದಗಿಸಿದಲ್ಲದೆ ಈ ತಂಡವು ಯುಎಇಯಲ್ಲಿ ಹಲವಾರು ಬಹುಮಾನಗಳನ್ನು ಪಡೆದಿರುತ್ತದೆ.
ಕರ್ನಾಟಕ ಸಂಘ ಶಾರ್ಜಾದ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೊಯಲ್ ಡಿ.ಅಲ್ಮೆಡಾರವರು ಯುಎಇಯಲ್ಲಿ ಕಳೆದ ಮೂರು ದಶಕಗಳಿಂದ ಮಹಿಳಾ ಥ್ರೋಬಾಲ್ ,ಪುರುಷರ ಥ್ರೋಬಾಲ್,ವಾಲಿಬಾಲ್, ಕಬಡ್ಡಿ ,ಕ್ರಿಕೆಟ್ ಹಾಗೂ ಇನ್ನಿತರ ಕ್ರೀಡಾ ಕೂಟಗಳನ್ನು ಆಯೋಜಿಸಿಕೊಂಡು ಬಂದಿರುವ ಅಲ್ಮೆಡಾರವರಿಗೆ ಮರುಭೂಮಿಯ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಗಲ್ಫ್ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ನಿಮ್ಮ ಕ್ರೀಡಾ ಕ್ಷೇತ್ರದ ಸಾಧನೆಗೆ ಸಂದ ಈ ಕ್ರೀಡಾ ರತ್ನ ಪ್ರಶಸ್ತಿಯು ನಿಮ್ಮ ಮುಂದಿನ ಕ್ರೀಡಾ ಸಾಧನೆಗೆ ದಾರಿ ದೀಪವಾಗಲಿ ಅಂತ ನಮ್ಮ ಮಾಧ್ಯಮದ ಮೂಲಕ ಅಭಿನಂದಿಸುತ್ತಿದ್ದೇವೆ.
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

