ಮಂಗಳೂರು : ಅಸ್ತ್ರ ಪ್ರೊಡಕ್ಷನ್ಸ್ ಹಾಗೂ ಅಮೈ ಕ್ರಿಯೇಶನ್ಸ್ ಅರ್ಪಿಸುವ ಶ್ರೀ ದತ್ತಾತ್ರೇಯ ಪಾಟ್ಕರ್ ನಿರ್ಮಾಣದ “ಲೈಟ್ ಹೌಸ್ ” ಕನ್ನಡ ಚಲನಚಿತ್ರ ಇದೇ ಮೇ 16 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ ಎಂದು ಚಿತ್ರದ ನಿರ್ದೇಶಕರಾದ ಸಂದೀಪ್ ಕಾಮತ್ ಅಜೆಕಾರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕರಾವಳಿ ಭಾಗದ ಕಲೆ-ಸಂಸ್ಕೃತಿ-ಆಚಾರ- ವಿಚಾರಗಳನ್ನು ಬಹಳ ಸುಂದರವಾಗಿ ಸಿನೆಮಾದಲ್ಲಿ ತೋರಿಸಲಾಗಿದ್ದು. ಚಿತ್ರದ ಬಹುತೇಕ ಎಲ್ಲಾ ಚಿತ್ರೀಕರಣವನ್ನು ಉಡುಪಿಯಲ್ಲಿ ನಡೆಸಲಾಗಿದೆ. ಕರಾವಳಿಯ ಸೌಂದರ್ಯವನ್ನು ಸಿನೆಮಾದಲ್ಲಿ ಬಹಳ ಸುಂದರವಾಗಿ ಸೆರೆಹಿಡಿಯಲಾಗಿದೆ.
“ಲೈಟ್ ಹೌಸ್” ಸಂಪೂರ್ಣ ಸಾಂಸಾರಿಕ ಚಿತ್ರವಾಗಿದ್ದು, ಇಡೀ ಕುಟುಂಬ ಸಮೇತ ಮಕ್ಕಳ ಜೊತೆ ಕೂತು ನೋಡುವ ಸಿನೆಮಾ ಇದಾಗಿದ್ದು, ಪ್ರಸ್ತುತ ಕನ್ನಡ ಮಾದ್ಯಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ನೇತ್ರದಾನದ ಮಹತ್ವ ಹಾಗೂ ಹಾಗೂ ಕರಾವಳಿಯ ಕಲೆ-ಸಂಸ್ಕೃತಿಯನ್ನು ಸಮಾಜಕ್ಕೆ ತೋರಿಸುವ ಕಥೆ ಈ ಚಿತ್ರದಲ್ಲಿದೆ ಎಂದು ಸಂದೀಪ್ ಕಾಮತ್ ಹೇಳಿದರು.

ನಂತರ ಮಾತನಾಡಿದ ನಟಿ ಶೈಲಾಶ್ರೀ ಚಿತ್ರದ ಕಥೆ ಕೇಳಿ ಬಹಳ ಇಷ್ಟವಾಯಿತು ಈ ಚಿತ್ರದಲ್ಲಿ ನಾನು ಟೀಚರ್ ಪಾತ್ರವನ್ನು ನಿರ್ವಹಿಸಿದ್ದೇನೆ.ಅಲ್ಲದೆ ಚಿತ್ರದಲ್ಲಿ ಕರಾವಳಿಯ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ ಚಿತ್ರದಲ್ಲಿ ಒಂದು ಉತ್ತಮವಾದ ಸಂದೇಶವಿದ್ದು ಎಲ್ಲರೂ ಕುಟುಂಬ ಸಮೇತರಾಗಿ ಬಂದು ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸ ಬೇಕೆಂದರು.

ತಾರಾಗಣದಲ್ಲಿ ಶೋಭರಾಜ್ ಪಾವೂರು, ಮಾನಸಿ ಸುಧೀರ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಪೃಥ್ವಿ ಅಂಬರ್, ರಾಹುಲ್ ಅಮೀನ್, ಶೈಲಶ್ರೀ ಮುಲ್ಕಿ, ಶೀತಲ್ ನಾಯಕ್, ಅಚಲ್ ಜಿ ಬಂಗೇರ, ಅಪೂರ್ವ ಮಾಳ, ಚಂದ್ರಕಲಾ ರಾವ್, ತಿಮ್ಮಪ್ಪ ಕುಲಾಲ್, ನಮಿತಾ ಕಿರಣ್ ಮುಂತಾದವರು ಚಿತ್ರದ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹಾಗೂ ಕ್ಲಿಂಗ್ ಜಾನ್ಸನ್ ಇವರ ಸಾಹಿತ್ಯಕ್ಕೆ ಹೆಸರಾಂತ ಗಾಯಕರಾದ ವಿಜಯ್ ಪ್ರಕಾಶ್, ವಾಸುಕೀ ವೈಭವ್, ಪೃಥ್ವಿ ಭಟ್, ದಿಯಾ ಹೆಗ್ಡೆ ಹಾಡುಗಳಿಗೆ ಧ್ವನಿ ನೀಡಿರುತ್ತಾರೆ.ಸಂಕಲನ ಹಾಗೂ ಛಾಯಾಗ್ರಹಣ ಜವಾಬ್ದಾರಿಯನ್ನು ಪ್ರಜ್ವಲ್ ಸುವರ್ಣ ವಹಿಸಿಕೊಂಡಿದ್ದು, ಚಿತ್ರಕ್ಕೆ ಸಂಗೀತವನ್ನು ಕಾರ್ತಿಕ್ ಮುಲ್ಕಿ ನೀಡಿರುತ್ತಾರೆ. ಉಡುಪಿ ನಮ್ಮ ಊರು ಹಾಡಿಗೆ ಗಿರಿಧರ್ ದಿವಾನ್ ಸಂಗೀತವನ್ನು ನೀಡಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಯತೀಶ್ ಪೂಜಾರಿ, ನಿರ್ಮಾಪಕ ದತ್ತಾತ್ರೇಯ ಪಾಟ್ಕರ್, ಪುಂಡಲೀಕ ಮರಾಠೆ ಉಪಸ್ಥಿತರಿದ್ದರು

