ಮಂಗಳೂರು : ಮಂಗಳೂರಿನ ಬಜಪೆ ಹೊರವಲಯದ ಕಿನ್ನಿಪದಪು ಎಂಬಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಎಂಬಾತನ ಬರ್ಬರ ಹತ್ಯೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು ಇದೀಗ ತಲೆಮರೆಸಿಕೊಂಡಿದ್ದ ಮತ್ತೆ ಮೂವರು ಆರೋಪಿಗಳನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತರ ಪೈಕಿ ಕಾಪು ಬದ್ರಿಯಾ ನಗರ ಬೆಳಪು ನಿವಾಸಿ ಅಬ್ದುಲ್ ಖಾದರ್ ಯಾನೆ ನೌಫಲ್ (24) ಫರಂಗಿಪೇಟೆ ನಿವಾಸಿ ನೌಶಾದ್ ಯಾನೆ ವಾಮಂಜೂರು ನೌಶಾದ್ ಯಾನೆ ಚೊಟ್ಟೆ ನೌಶಾದ್(39)ಹಾಗೂ ಕಳವಾರು ಆಶ್ರಯ ಕಾಲೋನಿ ನಿವಾಸಿ ಅಜರುದ್ದೀನ್ ಯಾನೆ ಅಜ್ಜು (29) ಬಂಧಿತ ಆರೋಪಿಗಳು.

ಆರೋಪಿ ಅಬ್ದುಲ್ ಖಾದರ್ ಸುಹಾಸ್ ಶೆಟ್ಟಿ ಕೊಲೆಯ ನಂತರ ಆರೋಪಿಗಳು ಕಾರಿನಲ್ಲಿ ಪರಾರಿಯಾಗುವುದಕ್ಕೆ ಸಹಕರಿಸಿದ್ದ. ನೌಶಾದ್ ಯಾನೆ ಚೊಟ್ಟೆ ಈತ ಸುಹಾಸ್ ಕೊಲೆ ಪ್ರಕರಣದ ಸಂಚು ರೂಪಿಸಲು ಸಹಕರಿಸಿದ್ದ ಹಾಗೂ ಕೊಲೆ ಕ್ರತ್ಯದಲ್ಲಿ ಭಾಗಿಯಾಗಿದ್ದ ಈತನ ಹಿಂದೆ ಬಜ್ವೆ,ಸುರತ್ಕಲ್, ಮಂಗಳೂರು, ಮೂಡಬಿದ್ರೆ,ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಗಳಲ್ಲಿ ಕೊಲೆ,ಕೊಲೆಯತ್ನ, ದರೋಡೆ ಮುಂತಾದ 6 ಪ್ರಕರಣಗಳಿವೆ ಹಾಗೂ ಮತ್ತೊರ್ವ ಆರೋಪಿ ಅಜರುದ್ದೀನ್ ಈತ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನಗಳ ಬಗ್ಗೆ ಇತರ ಆರೋಪಿಗಳಿಗೆ ಮಾಹಿತಿ ನೀಡಿ ಕೊಲೆಗೆ ಸಹಕರಿಸಿದ್ದ ಈತನ ವಿರುದ್ಧ ಸುರತ್ಕಲ್, ಪಣಂಬೂರು,ಮುಲ್ಕಿ ಠಾಣೆಗಳಲ್ಲಿ ಪ್ರಕರಣಗಳಿವೆ.

ಆರೋಪಿಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು.ಆರೋಪಿಗಳ ಪೈಕಿ ಅಜರುದ್ದೀನ್ ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು. ಇನ್ನಿಬ್ಬರು ಆರೋಪಿಗಳನ್ನು 7ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೋಲಿಸರು ತಿಳಿದಿದ್ದಾರೆ.

