ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ನಂತರ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ನ ಬ್ರಾಂಡ್ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿಕೊಂಡಿದೆ.
ಎರಡು ವರ್ಷಗಳ ಅವಧಿಗೆ ತಮನ್ನಾ ಅವರಿಗೆ 6.20 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂಬ ಸುತ್ತೋಲೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದರೆ ತಮನ್ನಾ ಬದಲಿಗೆ ಕರ್ನಾಟಕದ ನಟಿ ಬಾಲಿವುಡ್ನಲ್ಲಿ ಹೆಸರುವಾಸಿಯಾಗಿರುವ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಬಹುದಿತ್ತು ಎಂದು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಇದೀಗ ಕನ್ನಡಿಗರು ಪರಭಾಷಾ ನಟಿಯನ್ನು ಆಯ್ಕೆ ಮಾಡಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಕನ್ನಡ ನಟಿಯರ ಬದಲು ಹಿಂದಿ,ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿರುವ ನಟಿಯನ್ನು ಆಯ್ಕೆ ಮಾಡಿರುವುದು ಟೀಕೆಗೆ ಗುರಿಯಾಗಿದೆ.ಇದಕ್ಕೆ ಸ್ಪಷ್ಟನೆ ನೀಡಿರುವ ಸಚಿವ ಎಂಬಿ ಪಾಟೀಲ್ ಕನ್ನಡ ಚಲನಚಿತ್ರೊದ್ಯಮದ ಬಗ್ಗೆ ನಮಗೆ ಅಪಾರ ಗೌರವವಿದೆ. ಕನ್ನಡ ಸಿನಿಮಾ ಬಾಲಿವುಡ್ ಸಿನಿಮಾಗೂ ಪೈಪೋಟಿ ನೀಡ್ತಿದೆ.ಕೆ ಎಸ್ ಡಿಎಲ್ ಕರ್ನಾಟಕದ ಹೊರಗಿನ ಮಾರುಕಟ್ಟೆ ಭೇದಿಸುವ ಉದ್ದೇಶ ಹೊಂದಿದ್ದು ಹಾಗಾಗಿ ಬೇರೆ ಭಾಷೆಯ ನಟಿಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.


