ಉತ್ರರ ಪ್ರದೇಶದಲ್ಲಿ ಈಗ ಬೇಸಿಗೆ ಕಾಲ ಇದು ಅತ್ಯಂತ ಬಿಸಿಲಿನ ಸಮಯ ಜೊತೆಗೆ ವಿದ್ಯುತ್ ಕಡಿತದಿಂದ ಜನರು ಕಂಗಳಾಗಿದ್ದಾರೆ.ದಿನದ 18 ಗಂಟೆಗಳ ಕಾಲ ಮನೆಯಲ್ಲಿ ವಿದ್ಯುತ್ ಇಲ್ಲದೆ ಸೆಕೆಯಿಂದ ತತ್ತರಿಸುತ್ತಿದ್ದಾರೆ .ರಾತ್ರಿ ಮನೆಯಲ್ಲಿ ಮಲಗುವುದು ನರಕಯಾತನೆಯ ಅನುಭವ ಕೂಡಾ.ಈ ಕಾರಣದಿಂದ ಝಾನ್ಸಿಯ ಒಂದು ಕುಟುಂಬವು ಮನೆಯಿಂದ ಹೊರಬಂದು ಹೊದಿಕೆಗಳನ್ನು ಹಿಡಿದುಕೊಂಡು ಹೊರಾಂಗಣದಲ್ಲಿ ಮಲಗಲು ಬಂದಿದ್ದರು ಆಗ ಆವರಿಗೆ ದೀಪ ಉರಿಯುತ್ತಿರುವ ಎಟಿಯಂ ಒಂದನ್ನು ಕಂಡರು.ಆಗ ಕುಟುಂಬ ಸಮೇತ ಅಲ್ಲಿಗೆ ಹೋಗಿ ಬಾಗಿಲು ತೆರೆದ ತಕ್ಷಣ ಅಲ್ಲಿ ಎಸಿ ಚಲಾಯಿಸಿದರಿಂದ ಒಳಗೆ ತಂಪಾಗಿತ್ತು. ಮುಂದೆ ಏನೂ ಯೋಚಿಸದೆ, ಆ ರಾತ್ರಿ ಅವರು ಅಲ್ಲೇ ಮಲಗಲು ನಿರ್ಧರಿಸಿದರು. ನಿರೀಕ್ಷೆಯಂತೆ ಎಲ್ಲರೂ ಕಂಬಳಿ ಹೊದ್ದು ಅಲ್ಲಿ ಚೆನ್ನಾಗಿ ನಿದ್ದೆ ಮಾಡಿದರು. ಆದರೆ ಕೆಲವರು ಇದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತರ ಅದು ವೈರಲ್ ಆಗಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಜಯಂತಿ ಕುಶ್ವಾಹ ಎಂಬ ಮಹಿಳೆ ಮತ್ತು ತನ್ನ 10, 14 ಮತ್ತು 16 ವರ್ಷ ವಯಸ್ಸಿನ ಮೂವರು ಗಂಡು ಮಕ್ಕಳು ಎಟಿಎಂ ಒಳಗಡೆ ವಿಶ್ರಾಂತಿ ಪಡೆಯುತ್ತಿರುವುದನ್ನು ತೋರಿಸಲಾಗಿದೆ. “ಕನಿಷ್ಠ ಪಕ್ಷ ಇಲ್ಲಿ ವಿದ್ಯುತ್ ಇರುವುದರಿಂದ ನಾವು ಇಲ್ಲಿದ್ದೇವೆ. ನಾವು ಎಲ್ಲಿಗೆ ಹೋಗಬೇಕು? ರಾತ್ರಿ ಅಥವಾ ಬೆಳಿಗ್ಗೆ ನಮಗೆ ವಿದ್ಯುತ್ ಸಿಗುತ್ತಿಲ್ಲ. ಹಾಗಾಗಿ ನಾನು, ನನ್ನ ಇಡೀ ಕುಟುಂಬದೊಂದಿಗೆ, ಬಿಸಿಯ ಶಾಖದಿಂದ ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದೇನೆ” ಎಂದು ಜಯಂತಿ ಹೇಳಿದರು.

ಎಟಿಎಂ ಬೂತ್ ಒಳಗೆ ಸ್ಥಳೀಯರು ವಿಶ್ರಾಂತಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿದ್ಯುತ್ ಕಡಿತದಿಂದ ಜನರು ಹೆಚ್ಚು ಹೆಚ್ಚು ನಿರಾಶೆಗೊಂಡಿದ್ದು ಪರಿಸ್ಥಿತಿ ಹದಗೆಟ್ಟಿದೆ, ಜನರು ವಿದ್ಯುತ್ ಕಡಿತದ ವಿರುದ್ಧ ಬೀದಿ ಪ್ರತಿಭಟನೆ ನಡೆಸುತ್ತಿದ್ದಾರೆ, ಉಪವಾಸ ಸತ್ಯಾಗ್ರಹ ಮತ್ತು ರಸ್ತೆ ತಡೆಗಳನ್ನು ನಡೆಸುತ್ತಿದ್ದಾರೆ.ಇದೀಗ ಯುಪಿ ಸರಕಾರದ ವಿರುದ್ದ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ವಿರುದ್ಧ ಯುಪಿ ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರತಿಭಟನೆ ನಡೆಸುತ್ತಿದ್ದಾರೆ.

