ದುಬೈ: ಯುಎಇಯ ಪದ್ಮಶಾಲಿ ಸಮುದಾಯವು ತನ್ನ 16ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಮೇ. 25 ರಂದು ಪದ್ಮಶಾಲಿ ಸಮಾಜದ ಅಧ್ಯಕ್ಷರಾದ ಶ್ರೀ ರಘುರಾಮ್ ಶೆಟ್ಟಿಗಾರ್ ಕುಕ್ಕಿಕಟ್ಟೆಯವರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆಯು ಬಹಳ ಶ್ರದ್ದಾ ಭಕ್ತಿಯಿಂದ ಅದ್ದೂರಿಯಾಗಿ ದುಬೈನ ಸಿಂಧಿ ಸರೆಮೋನಿಯಲ್ ಸೆಂಟರ್ ನಲ್ಲಿ ಜರಗಿತು.

ಕಾರ್ಯಕ್ರಮವು ಬೆಳಿಗ್ಗೆ 10.00 ಗಂಟೆಗೆ ಸಂಕಲ್ಪ, ಕಲಶ ಪ್ರತಿಷ್ಠಾಪನೆ ನಂತರ ಅಧ್ಯಕ್ಷರು ಹಾಗೂ ಮಹಿಳಾ ಸದಸ್ಯರಿಂದ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀ ರಮಣ ತಂತ್ರಿಗಳ ನೇತ್ರತ್ವದಲ್ಲಿ ಸತ್ಯನಾರಾಯಣ ಪೂಜಾ ವಿಧಿವಿಧಾನಗಳು ನೆರವೇರಿತು. ಪದ್ಮಶಾಲಿ ಸಮಾಜದ ಪರವಾಗಿ ಜಗದೀಶ್ ಶೆಟ್ಟಿಗಾರ್ ಮತ್ತು ಶ್ರೀಮತಿ ವಿಜಯಶ್ರೀ ದಂಪತಿಗಳು ಪೂಜಾ ಕ್ರಮವನ್ನು ನೆರವೇರಿಸಿದರು.

ನಂತರ ಶ್ರೀ ರಮಣ ತಂತ್ರಿಯವರು ನೆರೆದ ಭಕ್ತಾದಿಗಳನ್ನು ಆಶೀರ್ವದಿಸಿ ಮಾತನಾಡಿ ದುಬೈಯಲ್ಲಿ ಪ್ರತೀವರ್ಷ ಆಚರಿಸಿಕೊಂಡು ಬಂದಂತಹ ಶ್ರೀ ಸತ್ಯನಾರಾಯಣ ಪೂಜೆಯಿಂದಾಗಿ ಸಂಘಟನೆಯು ಸಂಘಟಿತವಾಗಿ ಅಭಿವೃದ್ಧಿ ಹೊಂದಲು ಕಾರಣವಾಗುತ್ತದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಕೊಡಲು ಪದ್ಮಶಾಲಿ ಸಮಾಜ ಭಾಂದವರಿಗೆ ಇನ್ನಷ್ಟು ಶಕ್ತಿ ಕೊಡಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸಿದರು.



ಪದ್ಮಶಾಲಿ ಭಜನಾ ತಂಡವು ಭಜನಾ ಕಾರ್ಯಕ್ರಮವನ್ನು ಬಹಳ ಸುಮಧುರವಾಗಿ ನಡೆಸಿಕೊಟ್ಟರು.ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀ ರಘುರಾಮ್ ಶೆಟ್ಟಿಗಾರ್ ರವರು ಮಾತನಾಡಿ ದುಬೈಯ ಸಂಘವು ನಡೆಸಿಕೊಂಡು ಬಂದಂತಹ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿದರು. ಇಂದಿನ ಸತ್ಯನಾರಾಯಣ ಪೂಜೆಯು ಯುಎಇಯಲ್ಲಿ ನೆಲೆಸಿರುವ ಪದ್ಮಶಾಲಿ ಯುವ ಪೀಳಿಗೆಗೆ ಮತ್ತು ಮಕ್ಕಳಿಗೆ ಸನಾತನ ಧರ್ಮದ ಆಚರಣೆಯ ಬಗ್ಗೆ ತಿಳುವಳಿಕೆ ಮೂಡಿಸಲು ಅತ್ಯಂತ ಮಹತ್ವದ್ದಾಗಿದೆ, ಇದರಿಂದ ಅವರು ಆಧ್ಯಾತ್ಮಿಕ ಚಟುವಟಿಕೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.


ಪದ್ಮಶಾಲಿ ಸಮಾಜ ದುಬೈ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳ ಯಶಸ್ಸಿಗೆ ಯು .ಎ .ಇ ಯಲ್ಲಿ ನೆಲೆಸಿರುವ ಪದ್ಮಶಾಲಿ ಸದಸ್ಯರ ಸಹಕಾರವೇ ಪ್ರಾಮುಖ್ಯವಾದುದು, ಈ ಸಹಕಾರವನ್ನು ಮುಂದೆಯೂ ಮುಂದುವರಿಸಿಕೊಂಡು ಬರಬೇಕೆಂದು ಕರೆಕೊಟ್ಟರು. ನಂತರ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 9ನೇ ರಾಂಕ್ ಪಡೆದ ಸಂಘದ ಸದಸ್ಯರಾದ ಶ್ರೀ ಸದಾಶಿವ ಶೆಟ್ಟಿಗಾರ್ ಹಾಗು ಶ್ರೀಮತಿ ಪ್ರಜ್ವಲ ಅವರ ಪುತ್ರಿ ಅನನ್ಯ ಶೆಟ್ಟಿಗಾರ್ ಅವರನ್ನು ಪುರಸ್ಕರಿಸಿ ಸನ್ಮಾನಿಸಲಾಯಿತು.


ಕೀರ್ತಿ ಕುಮಾರ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು . ಅವಿನ್ ಕುಮಾರ್ ರವರು ಧನ್ಯವಾದವನ್ನು ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಯುಎಇಯಲ್ಲಿರುವ ವಿವಿಧ ಸಂಘ ಸಂಸ್ಥೆಗಳ ಅದ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮಹನೀಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.



ಕಾರ್ಯಕಾರಿ ಸಮಿತಿಯ ಸದಸ್ಯರಾದ ವರದ್ ರಾಜ್ ಶೆಟ್ಟಿಗಾರ್, ಶ್ರೀಮತಿ ಅರುಂಧತಿ ಮನೋಹರ್, ಮನಿಷ್ ಪದ್ಮಶಾಲಿ, ಹಾಗು ಅರವಿಂದ್ ಶೆಟ್ಟಿಗಾರ್ ವಿವಿಧ ಕಾರ್ಯಕರ್ತರ ತಂಡಗಳ ನೇತ್ರತ್ವವನ್ನು ವಹಿಸಿ ಕಾರ್ಯಕ್ರಮವು ಶಿಸ್ತು ಬದ್ಧವಾಗಿ ನಡೆಸಲು ಸಹಕರಿಸಿದರು.



