ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಪಿಕಪ್ ವಾಹನ ಚಾಲಕ ಅಬ್ದುಲ್ ರಹೀಂ (32) ಹತ್ಯೆ ಮತ್ತು ಕಲಂದರ್ ಶಾಫಿ ಎಂಬವರ ಮೇಲಿನ ಕೊಲೆಯತ್ನ ಪ್ರಕರಣ ಸಂಬಂಧಿಸಿ ಸ್ಥಳೀಯ ಇಬ್ಬರು ಸೇರಿ ಒಟ್ಟು 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಹಾಗೂ ಕೊಲೆಯತ್ನ ಪ್ರಕರಣದಲ್ಲಿ ಹಿಂದೂ ಸಂಘಟನೆಯ ಸದಸ್ಯರಾದ ದೀಪಕ್ ಮತ್ತು ಸುಮಿತ್ ಸೇರಿ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು ದೀಪಕ್ ಮತ್ತು ಸುಮಿತ್ ಕೊಲೆಯಾದ ರಹೀಂ ಮತ್ತು ಕಲಂದರ್ ಶಾಫಿ ಅವರಿಗೆ ಪರಿಚಯಸ್ಥರೇ ಆಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೊಲೆಯಾದ ಅಬ್ದುಲ್ ರಹೀಂ ಮತ್ತು ಕಲಂದರ್ ಶಾಫಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಮರಳು ಇಳಿಸಿ ಹೊರಡುವ ಸಮಯ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು 15 ಮಂದಿ ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹೀಂ ಅವರ ಮೇಲೆ ಏಕಾಏಕಿ ದಾಳಿಮಾಡಿ ಅವರನ್ನು ಹೊರಗೆ ಎಳೆದು ತಲವಾರಿನಿಂದ ಯದ್ವಾತದ್ವಾ ಕಡಿದಿದ್ದಾರೆ. ಆಗ ಪಕ್ಕದಲ್ಲಿದ್ದ ಕಲಂದರ್ ಶಾಫಿಯವರು ತಡೆಯಲು ಹೋದಾಗ ಚೂರಿಯಿಂದ ಎದೆಗೆ ,ಕೈಗೆ ಬೆನ್ನಿಗೆ ತಿವಿದಿದ್ದಾರೆ. ಈ ವೇಳೆ ಅಲ್ಲಿದ್ದವರು ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದು ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಲಂದರ್ ಶಾಫಿ ಮಾಹಿತಿ ನೀಡಿದ್ದಾರೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಮುಹಮ್ಮದ್ ನಿಸಾರ್ ಎಂಬವರು ಬಂಟ್ಬಾಳ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

