ಉ.ಪ್ರದೇಶ : 2017 ರಿಂದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಅಧಿಕಾರಕ್ಕೆ ಬಂದ ನಂತರ ಯುಪಿ ಪೊಲೀಸರು ಸುಮಾರು 8,472 ಎನ್ಕೌಂಟರ್ಗಳಲ್ಲಿ 146 ರೌಡಿಗಳು ಕೊಂದಿದ್ದಾರೆ, ಕನಿಷ್ಠ 3,302 ಆರೋಪಿಗಳ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ, ಅವರಲ್ಲಿ ಹಲವರು ಅಪರಾಧಿಗಳ ಕಾಲುಗಳಿಗೆ ಗುಂಡು ಹಾರಿಸಲಾಗಿದೆ. ಇದನ್ನು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು “ಆಪರೇಷನ್ ಲಂಗ್ಡಾ (ಕುಂಟ)” ಎಂದು ಕರೆಯುತ್ತಾರೆ.

ಉತ್ತರ ಪ್ರದೇಶ ಪೊಲೀಸರು ರಾಜ್ಯಾದ್ಯಂತ ಅಪರಾಧಿಗಳ ವಿರುದ್ಧದ ಆಪರೇಷನ್ ಲಂಗ್ಡಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಲಕ್ನೋ, ಗಾಜಿಯಾಬಾದ್, ಆಗ್ರಾ, ಬಾಗ್ಪತ್, ಫಿರೋಜಾಬಾದ್, ಜಲೌನ್, ಬಲ್ಲಿಯಾ, ಹಾಪುರ್ ಮತ್ತು ಉನ್ನಾವೊಗಳಲ್ಲಿ ನಡೆದ ಸರಣಿ ಎನ್ಕೌಂಟರ್ ಗಳಲ್ಲಿ ಹಲವಾರು ಕ್ರಿಮಿನಲ್ ಮತ್ತು ವಾಂಟೆಡ್ ಕ್ರಿಮಿನಲ್ ಗಳನ್ನು ಬಂಧಿಸಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಯುಪಿ ಪೊಲೀಸರು 14 ಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಿದ್ದಾರೆ. ‘ಆಪರೇಷನ್ ಲಂಗ್ಡಾ’ ಅಡಿಯಲ್ಲಿ ಮಂಗಳವಾರ ನಡೆಸಲಾದ 11 ಎನ್ ಕೌಂಟರ್ ಗಳಲ್ಲಿ ಹೆಚ್ಚಿನವುಗಳಲ್ಲಿ ದಾಳಿಗೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದರು. ಆರೋಪಿಗಳಿಂದ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಕದ್ದ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ರಾಜ್ಯಾದ್ಯಂತ ‘ಆಪರೇಷನ್ ಲಂಗ್ಡಾ’ ಮುಂದುವರಿಕೆ
ಪುನರಾವರ್ತಿತ ಅಪರಾಧಿಗಳನ್ನು ಹತ್ತಿಕ್ಕುವ ಗುರಿಯನ್ನು ಹೊಂದಿರುವ ಉತ್ತರ ಪ್ರದೇಶ ಪೊಲೀಸರು ನಡೆಸುತ್ತಿರುವ “ಆಪರೇಷನ್ ಲಂಗ್ಡಾ” ದ ಭಾಗವಾಗಿ ಎನ್ಕೌಂಟರ್ಗಳ ಸರಣಿಯನ್ನು ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಯು ಹಲವಾರು ಸಂಘಟಿತ ಅಪರಾಧ ಶಂಕಿತರನ್ನು ಬಂಧಿಸಲು ಸಹಾಯ ಮಾಡಿದೆ ಎಂದು ಪೊಲೀಸರು ಹೇಳುತ್ತಾರೆ. ಈ ಪ್ರಕರಣಗಳಲ್ಲಿ ಕಂಡು ಬಂದ ಬಂದೂಕುಗಳು, ಕದ್ದ ವಸ್ತುಗಳು ಮತ್ತು ಕ್ರಿಮಿನಲ್ ದಾಖಲೆಗಳು ಆರೋಪಿಗಳು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವುದನ್ನು ಸೂಚಿಸುತ್ತವೆ. ಉಳಿದ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.


