ಉತ್ತರ ಪ್ರದೇಶ : ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಶಾರ್ಪ್ಶೂಟರ್ ನವೀನ್ ಕುಮಾರ್ ನನ್ನು ಉತ್ತರ ಪ್ರದೇಶದ ಹಾಪುರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ.

ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಮತ್ತು ದೆಹಲಿ ಪೊಲೀಸರ ಜಂಟಿ ತಂಡವು ಹಾಪುರ್ ಕೊಟ್ವಾಲಿ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಶಾರ್ಪ್ಶೂಟರ್ನನ್ನು ಗುಂಡಿಕ್ಕಿ ಕೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತನನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದ್ದು, ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಅಡಿಯಲ್ಲಿ ಈತ ಬೇಕಾಗಿದ್ದ. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಈತನ ಮೇಲೆ 20 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು ಎರಡು ಪ್ರಕರಣಗಳಲ್ಲಿ ದೆಹಲಿಯಲ್ಲಿ ಶಿಕ್ಷೆಗೊಳಗಾಗಿದ್ದಾನೆ.

ಬುಧವಾರ ರಾತ್ರಿ ಎಸ್ಟಿಎಫ್ನ ನೋಯ್ಡಾ ಘಟಕ ಮತ್ತು ದೆಹಲಿ ಪೊಲೀಸರ ವಿಶೇಷ ಘಟಕದ ಜಂಟಿ ತಂಡವು ಹಾಪುರ್ ಕೊಟ್ವಾಲಿ ಪ್ರದೇಶದಲ್ಲಿ ಅಪರಾಧಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿತು, ಇದರಲ್ಲಿ ಕುಮಾರ್ ಗಂಭೀರವಾಗಿ ಗಾಯಗೊಂಡರು ಎಂದು ಎಡಿಜಿಪಿ (ಎಸ್ಟಿಎಫ್) ಅಮಿತಾಭ್ ಯಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಗಾಜಿಯಾಬಾದ್ ಜಿಲ್ಲೆಯ ಲೋನಿ ನಿವಾಸಿ ನವೀನ್ ಕುಮಾರ್, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸಕ್ರಿಯ ಶಾರ್ಪ್ಶೂಟರ್ ಆಗಿದ್ದು, ಗ್ಯಾಂಗ್ ಸದಸ್ಯ ಹಾಶಿಂ ಬಾಬಾ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದರು ಎಂದು ಎಡಿಜಿಪಿ ತಿಳಿಸಿದ್ದಾರೆ.
“ನಮಗೆ ಒಬ್ಬ ಅಪರಾಧಿಯ ಬಗ್ಗೆ ಮಾಹಿತಿ ಬಂದಿತ್ತು, ಅದರ ನಂತರ ಕ್ರಮ ಕೈಗೊಳ್ಳಲು ದೆಹಲಿ ಪೊಲೀಸ್ ವಿಶೇಷ ತಂಡ ಮತ್ತು ನೋಯ್ಡಾ ಎಸ್ಟಿಎಫ್ನ ಜಂಟಿ ತಂಡವನ್ನು ರಚಿಸಲಾಯಿತು. ದೆಹಲಿಯ ಲಾರೆನ್ಸ್ ಗ್ಯಾಂಗ್ನ ಸದಸ್ಯನೊಬ್ಬ ಅಪರಾಧ ಕೃತ್ಯ ಎಸಗಲು ಹಾಪುರಕ್ಕೆ ಹೋಗುತ್ತಿದ್ದಾನೆ ಎಂದು ಮಾಹಿತಿಯ ಆಧಾರದ ಮೇಲೆ ನಾವು ಕಾರ್ಯಾಚರಣೆ ಪ್ರಾರಂಭಿಸಿದೆವು ಎಂದು ನೋಯ್ಡಾ ಎಸ್ಟಿಎಫ್ನ ಹೆಚ್ಚುವರಿ ಎಸ್ಪಿ ಆರ್ಕೆ ಮಿಶ್ರಾ ಹೇಳಿದ್ದಾರೆ.

