ಮುಂಬೈ ಭೂಗತ ಜಗತ್ತನ್ನೇ ನಡುಗಿಸಿದ್ದ ಪೊಲೀಸ್ ಅಧಿಕಾರಿ ದಯಾ ನಾಯಕ್ಗೆ ಸಹಾಯಕ ಪೊಲೀಸ್ ಆಯುಕ್ತ (ACP) ಹುದ್ದೆಗೆ ಬಡ್ತಿ ಸಿಕ್ಕಿದೆ.
ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾದ ದಯಾ ನಾಯಕ್ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಗ್ರಾಮದವರು. 1995 ರಲ್ಲಿ ಮುಂಬೈ ಪೊಲೀಸ್ ಇಲಾಖೆ ಸೇರಿದ ಅವರು 2004ರ ವರೆಗೆ ಸುಮಾರು 85 ಕ್ಕೂ ಹೆಚ್ಚು ಎನ್ಕೌಂಟರ್ಗಳನ್ನು ಮಾಡಿ ಮುಂಬೈನ ಅನೇಕ ಕುಖ್ಯಾತ ಪಾತಕಿಗಳನ್ನು ಶಾಶ್ವತವಾಗಿ ಇಹಲೋಕ ತ್ಯಜಿಸುವಂತೆ ಮಾಡಿದರು.ಇದರಿಂದಾಗಿ ಪಾತಕಿಗಳಲ್ಲಿ ಭಯ, ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿತು.

ಬಾಂದ್ರಾ ಕ್ರೈಂ ಬ್ರಾಂಚ್ನಲ್ಲಿ ಅಧಿಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಯಾ ನಾಯಕ್ ಇತ್ತೀಚಿನ ಮುಂಬೈನ ಡ್ರಗ್ಸ್ ಮಾಫಿಯಾ ವಿರುದ್ಧ ಪರಿಣಾಮಕಾರಿ ಕಾರ್ಯಾಚರಣೆ ನಡೆಸಿದ್ದಾರೆ. ಉಪನಗರಗಳಲ್ಲಿ ಸಕ್ರಿಯವಾಗಿದ್ದ ಮಾದಕವಸ್ತು ಜಾಲಗಳ ಮೇಲೆ ದಾಳಿ ನಡೆಸಿ ಅನೇಕ ಜಾಲಗಳನ್ನು ಧ್ವಂಸ ಮಾಡಿದ್ದಾರೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿ (ATS) ಕೆಲಸ ಮಾಡಿದ ಅವರು ಮಾದಕ ವಸ್ತುಗಳ ಜಾಲವನ್ನು ತಡೆಗಟ್ಟುವಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದರು. ಕೋಟ್ಯಾಂತರ ರೂಪಾಯಿಗಳ ಮೌಲ್ಯದ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿದ ಮಹತ್ವದ ಸಾಧನೆ ಅವರದ್ದಾಗಿದೆ.ಅವರ ಈವರೆಗಿನ ಸೇವೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರವು ಅವರಿಗೆ ಎಸಿಪಿ ಹುದ್ದೆಗೆ ಭಡ್ತಿ ನೀಡಿದೆ.

