ಬೆಂಗಳೂರು : ಕನ್ನಡ ನಾಡು ಕಂಡ ಪ್ರಖ್ಯಾತ ಕವಿ,ಸಾಹಿತಿ, ಕಾದಂಬರಿಕಾರ,ಸಂಭಾಷಣೆಕಾರ ಹೆಚ್.ಎಸ್ ವೆಂಕಟೇಶಮೂರ್ತಿ (81)ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ.
ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.ಎಚ್ಎಸ್ವಿ ಅವರಿಗೆ ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜೂನ್ 23, 1944 ನಾರಾಯಣ ಭಟ್ಟ ಮತ್ತು ನಾಗರತ್ನಮ್ಮ ದಂಪತಿಯ ಮಧ್ಯಮ ಕುಟುಂಬದಲ್ಲಿ ಜನಿಸಿದರು.ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಪದವಿ ಪಡೆದರು ನಂತರ 1973 ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಸುಮಾರು 30 ವರ್ಷಗಳ ಕಾಲ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ನಂತರ ಕನ್ನಡದಲ್ಲಿ ಕಥನ ಕವನಗಳು ಎಂಬ ಮಹಾಪ್ರಬಂಧಕ್ಕೆ ಪಿಚ್ ಡಿ ಪದವಿಯನ್ನು ಪಡೆದಿದ್ದರು.
2000ರಲ್ಲಿ ವ್ರತ್ತಿಯಿಂದ ನಿವೃತ್ತರಾದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಕನ್ನಡದಲ್ಲಿ 100ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರು, ಕವಿತೆ,ನಾಟಕ, ಭಾವಗೀತೆ, ಚಿತ್ರಗೀತೆ,ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಇವರು ಅನುವಾದಿಸಿದ ಕಾಳಿದಾಸನ ಋತುಸಂಹಾರ ಕಾವ್ಯಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರವನ್ನು ನೀಡಿ ಗೌರವಿಸಿದೆ.85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಆಕಾಶವಾಣಿ ರಾಷ್ಟೀಯ ಪ್ರಶಸ್ತಿ ಲಭಿಸಿವೆ.
ಕನ್ನಡ ಚಿತ್ರರಂಗದಲ್ಲೂ ತನ್ನ ಛಾಪು ಮೂಡಿಸಿದ ಅವರು ಚಿನ್ನಾರಿಮುತ್ತ, ಕೊಟ್ರೇಶಿ ಕನಸು, ಅಮೇರಿಕಾ ಅಮೇರಿಕಾ, ಕಿರಿಕ್ ಪಾರ್ಟಿ ಮುಂತಾದ ಜನಪ್ರಿಯ ಚಲನಚಿತ್ರಗಳಲ್ಲಿ ಇವರು ಹಾಡುಗಳನ್ನು ರಚಿಸಿದ್ದಾರೆ.ಕಿರುತೆರೆ ಧಾರವಾಹಿಗಳಾದ ಮುಕ್ತ, ಮಹಾಪರ್ವ, ಧಾರಾವಾಹಿಗಳ ಶೀರ್ಷಿಕೆ ಗೀತೆ ರಚಿಸಿದ್ದರು
ಇಂದು ಹೆಚ್.ಎಸ್ ವೆಂಕಟೇಶಮೂರ್ತಿ ಅವರು ನಮ್ಮನ್ನಗಲಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

