ಮಂಗಳೂರು : ನಾವು ಹಿಂದೂ ಮುಖಂಡರ ಲಿಸ್ಟ್ ರೆಡಿ ಮಾಡಿದ್ದೇವೆ.ನಾವು ಈಗಲೇ ದೆಹಲಿ ತಲುಪಿಯಾಗಿದೆ. ಹಲವು ಹಿಂದೂ ಮುಖಂಡರ ಪಟ್ಟಿ ಸಿದ್ಧ ಮಾಡಿದ್ದೇವೆ. ನಿನ್ನ ಹೆಸರು ಲಿಸ್ಟ್ ನಲ್ಲಿ ಮೊದಲಿಗಿದೆ. ನಿನ್ನ ಎಲ್ಲಾ ಚಲನವಲನಗಳನ್ನು ಗಮನಿಸುತ್ತಿದ್ದೇವೆ. ಕೊಲೆಯಾದ ಸುಹಾಸ್ ಶೆಟ್ಟಿ ಕೂಡಾ ನಮ್ಮ ಪಟ್ಟಿಯಲ್ಲಿದ್ದ. ಆದರೆ ಯಾರೋ ಒಳ್ಳೆಯ ಜನ ಅವನನ್ನು ಕೊಂದುಹಾಕಿದ್ದಾರೆ.
ನಿನ್ನ ಸ್ನೇಹಿತ ರಂಜಿತ್ ಎಂಬವನನ್ನು ಕೊಲ್ಲುತ್ತೇವೆ. ತಲೆ ಕಡಿದು ಸುಲಭವಾಗಿ ಕೊಲ್ಲುವುದಿಲ್ಲ. ಮೊದಲು ಆತನ ಕೈ ಕಾಲು ಕಡಿಯುತ್ತೇವೆ. ನಂತರ ತಲೆ ಕಡಿದು ದೆಹಲಿಯ ಮೈನ್ ಗೇಟ್ನಲ್ಲಿ ನೇತು ಹಾಕುತ್ತೇವೆ. ನಾವು ದೆಹಲಿಗೆ ಬಂದು ತಲುಪಿಯಾಗಿದೆ. ನಿಮ್ಮ ಉಲ್ಟಾ ಲೆಕ್ಕಾಚಾರ ಸ್ಟಾರ್ಟ್ ಆಗಿದೆ. ಹೀಗೆಂದು ಪಾಕಿಸ್ತಾನದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ಮಂಗಳೂರಿನ ಹಿಂದೂ ಜಾಗರಣ ವೇದಿಕೆ ಮುಖಂಡ ನರಸಿಂಹ ಮಾಣಿ ಅವರಿಗೆ ವಿದೇಶಿ ಸಂಖ್ಯೆಯಿಂದ ಬೆದರಿಕೆ ಸಂದೇಶ ಬಂದಿದೆ. ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಎಂಬವರಿಗೆ ವಾಟ್ಸ್ಆ್ಯಪ್ ಮೂಲಕ ಉರ್ದು ಬಾಷೆಯಲ್ಲಿ ಆಡಿಯೋ ಮೆಸೇಜ್ ಬಂದಿದೆ.

ನರಸಿಂಹ ಮಾಣಿ ನಿನ್ನನ್ನು ಹೇಗೆ ಕೊಲ್ಲುತ್ತೇವೆ ಎಂದು ಅಲ್ಲಾನಿಗೆ ಕೂಡ ಗೊತ್ತಿಲ್ಲ. ನಿನ್ನನ್ನು ಕೊಲೆ ಮಾಡಿದ ರೀತಿಯನ್ನು ನೋಡಿ ಜನ ಕೊಲ್ಲುವ ವಿಧಾನವನ್ನೇ ಮರೆಯಲಿದ್ದಾರೆ. ಮುಸ್ಲಿಮರಿಗೆ ತೊಂದರೆ ಕೊಡುವುದನ್ನು ಬಿಟ್ಟು ನಿನ್ನ ಬಗ್ಗೆ ಯೋಚಿಸು. ನಿಮ್ಮ ಪಾರ್ಟಿ ಅಥವಾ ಯಾವುದೇ ಮುಖಂಡರು ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ. ನಿಮ್ಮ ಜೊತೆಗೆ ನಿಮ್ಮ ಮುಖಂಡರನ್ನು ಮುಗಿಸಲಾಗುವುದು. ಇದು ಮುಜಾಹಿದೀನ್ ಸಂದೇಶ’ ಎಂದು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ಬಂದ ಸಂದೇಶದಲ್ಲಿ ಹೇಳಲಾಗಿದೆ.
ಬೆದರಿಕೆ ಸಂದೇಶ ಪಾಕಿಸ್ತಾನ, ಅಫ್ಘಾನಿಸ್ತಾನ, ಸೌದಿ ಅರೇಬಿಯಾ ಮೊಬೈಲ್ ಸಂಖ್ಯೆಯಿಂದ ಬಂದಿದೆ.ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೆದರಿಕೆ ಸಂದೇಶದ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಿಗೆ ದೂರು ದಾಖಲಿಸಲಾಗಿದೆ.

