ಬೆಂಗಳೂರು : ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ಬೆಂಗಳೂರಿನಲ್ಲಿರುವ ಒನ್ 8 ಕಮ್ಯೂನ್ ಪಬ್ ಮತ್ತು ರೆಸ್ಟೋರೆಂಟ್ ವಿರುದ್ಧ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA) ಉಲ್ಲಂಘನೆ ಆರೋಪದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆ 2024 ರ ಜುಲೈನಲ್ಲಿ ಅವಧಿ ಮೀರಿ ಪಬ್ ನಡೆಸುತ್ತಿದ್ದ ಆರೋಪದಲ್ಲಿ ಪಬ್ ಮೇಲೆ ಕೇಸ್ ದಾಖಲಾಗಿತ್ತು.ಇದೀಗ ಕೋಟ್ಪಾ ಆ್ಯಕ್ಟ್ ಅಡಿ ಕೇಸ್ ದಾಖಲಾಗಿದೆ. (ನಿಯಮಗಳನ್ನು ಉಲ್ಲಂಘಿಸಿ ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ನಿಯಂತ್ರಣ) ಕಾಯ್ದೆ (COTPA Act) ಅಡಿ ಪ್ರಕರಣ ದಾಖಲಿಸಲಾಗಿದೆ.

ಆವರಣದೊಳಗೆ ಗೊತ್ತುಪಡಿಸಿದ ಧೂಮಪಾನ ಪ್ರದೇಶವಿಲ್ಲದಿದ್ದಕ್ಕಾಗಿ COTPA ಯ ಸೆಕ್ಷನ್ 4 ಮತ್ತು 21 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಖಚಿತ ಮಾಹಿತಿ ಮೇರೆಗೆ ಸಬ್-ಇನ್ಸ್ಪೆಕ್ಟರ್ ಅಶ್ವಿನಿ ಜಿ ನೇತೃತ್ವದ ಪೊಲೀಸರ ತಂಡ, ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಕಸ್ತೂರ್ಬಾ ರಸ್ತೆಯಲ್ಲಿರುವ ರತ್ನಮ್ಸ್ ಕಾಂಪ್ಲೆಕ್ಸ್ನ ಆರನೇ ಮಹಡಿಯಲ್ಲಿರುವ ಕೊಹ್ಲಿ ಮಾಲಿಕತ್ವದ ಪಬ್ಗೆ ಹಠಾತ್ ದಾಳಿ ನಡೆಸಿ ತಪಾಸಣೆ ನಡೆಸಿತು.ಪರಿಶೀಲನೆಯ ನಂತರ ಬಾರ್ ಆ್ಯಂಡ್ ರೆಸ್ಟೋರೆಂಟ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೇ 29 ರಂದು ದಾಳಿ ಮಾಡಿದ್ದ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದರು. ನಂತರ ನ್ಯಾಯಾಲಯದಿಂದ ಅನುಮತಿ ಪಡೆದು ಇದೀಗ ಕೇಸ್ ದಾಖಲಿಸಿದ್ದಾರೆ.

2024ರ ಡಿಸೆಂಬರ್ ನಲ್ಲಿ ಇದೇ ಪಬ್ ಗೆ ಬಿಬಿಎಂಪಿ ಕೂಡ ನೋಟಿಸ್ ನೀಡಿತ್ತು.ಅಗ್ನಿ ಸುರಕ್ಷತಾ ಕ್ರಮ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣಪತ್ರ ಪಡೆದಿಲ್ಲ ಎಂಬ ಆರೋಪದಲ್ಲಿ ನೋಟಿಸ್ ನೀಡಲಾಗಿತ್ತು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ನೀಡಿದ್ದ ದೂರಿನ ಆಧಾರದಲ್ಲಿ ಬಿಬಿಎಂಪಿ ಈ ಕ್ರಮ ಕೈಗೊಂಡಿತು.


