ಚಿಕ್ಕಬಳ್ಳಾಪುರ: ಆರು ವರ್ಷದ ಬಾಲಕಿ ಮೇಲೆ 55 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ನಗರದ ಶಮ್ಸ್ ಮಸೀದಿ ಕೊಠಡಿಯಲ್ಲಿ ಅತ್ಯಾಚಾರ ಎಸಗಳಾಗಿದೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದು ಅವರು ನೀಡಿದ ದೂರಿನ ಆಧಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಮಹಪ್ಯೂಸ್ ಉತ್ತರ ಪ್ರದೇಶ ಮೂಲದವನಾಗಿದ್ದು.ಆತನ ಮಗ ಬೇರೊಂದು ಮಸೀದಿಯಲ್ಲಿ ಮೌಲ್ವಿಯಾಗಿ ಸೇವೆ ಸಲ್ಲಿಸುತ್ತಿದ್ದ.ಮಗ ಬೇರೊಂದು ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದುದರಿಂದ ಮೌಲ್ವಿಯ ಆಶ್ರಯಕ್ಕೆ ಮಸೀದಿಯ ಕೊಠಡಿಯನ್ನು ಆತನಿಗೆ ಜಮಾತ್ ನೀಡಿತ್ತು. ಅದೇ ಕೊಠಡಿಯನ್ನು ಆರೋಪಿ ಮಹಪ್ಯೂಸ್ ದುರುಪಯೋಗ ಪಡಿಸಿಕೊಂಡು ಬಾಲಕಿಗೆ ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಉತ್ತರ ಪ್ರದೇಶದ ಮೂಲದ ಮಹಪ್ಯೂಸ್ ಕಳೆದ 20 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಬಂದು ವಾಸ್ತವ್ಯ ಹೂಡಿದ್ದು ಬೀದಿ ಬದಿಗಳಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಇದೀಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಸೀದಿಯ ಮೌಲ್ವಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮೌಲ್ವಿಯ ಆಶ್ರಯಕ್ಕೆಂದು ಪಡೆದ ಕೊಠಡಿಯನ್ನು ತಂದೆಗೆ ಯಾಕೆ ನೀಡಿದ್ದು ಎಂದು ಸ್ಥಳೀಯರು ಮೌಲ್ವಿಯನ್ನು ಪ್ರಶ್ನಿಸುತ್ತಿದ್ದಾರೆ.ಮತ್ತೊಂದೆಡೆ ಸಂತ್ರಸ್ತೆ ಬಾಲಕಿಯ ತಾಯಿ ಹಾಗೂ ಸ್ಥಳೀಯರು ಆರೋಪಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನಲಾಗಿದೆ. ಆರೋಪಿ ಮಹಪ್ಯೂಸ್ ಎಂಬಾತನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

