ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಕಳೆದ ಇಪ್ಪತೈದು ವರ್ಷಗಳ ಹಿಂದೆ ವಿವಿಧ ಜಾತಿ ಸಮುದಾಯದ ಸಂಘಟನೆಗಳ ಪ್ರತಿನಿಧಿಗಳು ಒಟ್ಟು ಸೇರಿಕೊಂಡು ನಡೆಸಿಕೊಂಡು ಬರುತ್ತಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಈ ಬಾರಿ ಜೂನ್ 1ನೇ ತಾರೀಕಿನಂದು ದುಬಾಯಿಯ ಅಲ್ ಸಫಾದಲ್ಲಿರುವ ಜೆ. ಎಸ್. ಎಸ್. ಪ್ರೈವೆಟ್ ಸ್ಕೂಲ್ ಸಭಾಂಗಣದಲ್ಲಿ ಸಂಜೆ 4.00 ಗಂಟೆಗೆ ದೇವರ ಸಂಕಲ್ಪದೊಂದಿಗೆ ಶ್ರೀ ರಘು ಭಟ್ ಅವರ ಪೌರೊಹಿತ್ಯದಲ್ಲಿ ಬಹಳ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಸಾರ್ವಜನಿಕರ ಪರವಾಗಿ ಶ್ರೀ ರಮಾನಂದ್ ಶೆಟ್ಟಿ , ಶ್ರೀಮತಿ ಆಶಾ ರಮಾನಂದ್ ಶೆಟ್ಟಿ ದಂಪತಿ ಹಾಗೂ ಕಾರ್ಯಕಾರಿ ಸಮಿತಿಯ ಪರವಾಗಿ ಶ್ರೀ ವಿಶ್ವನಾಥ್ ಶೆಟ್ಟಿ, ಶ್ರೀಮತಿ ಉಷಾ ವಿಶ್ವನಾಥ್ ಶೆಟ್ಟಿಯವರು ಪೂಜಾಕ್ರಮವನ್ನು ನೆರವೇರಿಸಿದರು.

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಅಲ್ಲದೆ ಮೊಗವೀರ್ಸ್ ಭಜನಾ ಮಂಡಳಿ ದುಬಾಯಿ ಮತ್ತು ಶ್ರೀ ರಾಜರಾಜೇಶ್ವರಿ ಭಜನಾ ತಂಡಾ ದುಬಾಯಿ ಇವರ ವತಿಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿತು. ಮೊಗವೀರ್ಸ್ ದುಬಾಯಿ ತಂಡ, ಬ್ರಾಹ್ಮಣ ಸಮಾಜ ತಂಡ ಜಸ್ಮಿತಾ ನೃತ್ಯ ತಂಡದವರಿಂದ ಭಜನಾ ನೃತ್ಯ, ಸಾಮೂಹಿಕವಾಗಿ ಹನುಮಾನ್ ಚಾಲಿಸಾ ಪಠಣ ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.



ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಹೊನ್ನಾವರ ತಾಲೂಕಿನ ಬಳಿಯ ಇಡಗುಂಜಿಯವರಾದ ಅಯೋಧ್ಯೆಯ ಬಾಲ ರಾಮನ ಮೂರ್ತಿಯನ್ನು ಕೆತ್ತಿರುವ ಶಿಲ್ಪಿಗಳಲ್ಲಿ ಓರ್ವರಾದ ಶಿಲ್ಪಿ ಗಣೇಶ್ ಭಟ್ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಾಮೂಹಿಕ ಶ್ರೀ ಸತ್ಯನಾರಾಯಣ ಸಮಿತಿಯ ತಂಡದ ಜೊತೆಗೆ ಶ್ರೀ ವರಮಹಾ ಲಕ್ಷ್ಮೀ ಸೇವಾ ಸಮಿತಿ, ಬಿರುವೆರ್ ಕುಡ್ಲ ,ಗಾಣಿಗ ಸಮಾಜ ಹಾಗೂ ಇನ್ನಿತರ ಸಮಾಜದ ಸದಸ್ಯರುಗಳು ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.


ಪೂಜೆಯ ವಿವಿಧ ಸೇವೆಗಳನ್ನು ಮಾಡಿಸುವ ಜವಾಬ್ಧಾರಿಯನ್ನು ಮತ್ತು ಭಜನಾ ತಂಡ,ಪೂಜಾ ಮಂಟಪದ ಅಲಂಕಾರ ಮಾಡಿರುವ ಶ್ರೀ ರಾಜೇಶ್ ಕುತ್ತಾರ್ ಮತ್ತು ತಂಡದವರನ್ನು ಈ ಸಂಧರ್ಭದಲ್ಲಿ ಗೌರವಿಸಲಾಯಿತು.


ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ

