ಮಂಗಳೂರು: ಕುಡ್ಲ ಪೆಲಕಾಯಿ ಪರ್ಬ ಹೆಸರಿನಲ್ಲಿ ಆಯೋಜಿಸುತ್ತಿರುವ ಮಂಗಳೂರು ಹಲಸಿನ ಹಬ್ಬ ಕರಾವಳಿ ಜನರ ಸ್ಪೂರ್ತಿ ಮತ್ತೆ ಜೀವಂತಗೊಳಿಸಲು ಸಿದ್ಧವಾಗಿದೆ. ಈ ವಿಶಿಷ್ಟ ಹಬ್ಬವು ಜೂನ್ 21 ಮತ್ತು 22, 2025ರಂದು ಬೆಂದೂರ್ ವೆಲ್ನ ಸೇಂಟ್ ಸೆಬಾಸ್ಟಿಯನ್ ಸೆಂಟಿನರಿ ಆಡಿಟೋರಿಯಂನಲ್ಲಿ (ಸೆಂಟ್ ಆಗ್ನೆಸ್ ಕಾಲೇಜಿನ ಸಮೀಪ) ನಡೆಯಲಿದೆ ಹಾಗೂ ಕಾರ್ಯಕ್ರಮದ ಉದ್ಘಾಟನೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಅಶ್ವಿನ್ ಸಿಕ್ವೇರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹನಿಜೆನಿಕ್ಸ್ ಬೀ ಫಾರ್ಮ್ಸ್ ಹಾಗೂ ROಇಂಟರ್ನ್ಯಾಷನಲ್ ಇವುಗಳ ಜಂಟಿ ಪ್ರಾಯೋಜಕತ್ವದೊಂದಿಗೆ ಆಯೋಜಿಸಿರುವ ಈ ಕಾರ್ಯಕ್ರಮವು ಸ್ಥಳೀಯ ಕೃಷಿ,ಆಹಾರ ಪರಂಪರೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಉತ್ಸುಕರಾದ ಯುವಜನರ ಬೆಂಬಲದಿಂದ ನಡೆಯಲಿದೆ ಎಂದರು.

ಈ ಉತ್ಸವವು ಪ್ರಮುಖವಾಗಿ ರಾಜ್ಯದ ರೈತರಿಗೆ ಹಲಸು, ಮಾವು,ಅವಕಾಡೊ, ಡ್ರಾಗನ್ ಪ್ರೊಟ್, ರಾಂಬುಟಾನ್, ಮ್ಯಾಂಗೊಸ್ಟೀನ್ ಮತ್ತು ಇತರ ಬೆಳೆಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಇದೊಂದು ವೇದಿಕೆಯಾಗಲಿದೆ .ಇವೆಲ್ಲವೂ ನೇರವಾಗಿ ರೈತರಿಂದಲೇ ಲಭ್ಯವಾಗಲಿದ್ದು,ಈ ಮೂಲಕ ಸಾವಯುವ ಮತ್ತು ಸುಸ್ಥಿರ ಉತ್ಪನ್ನಗಳಿಗೆ ಒತ್ತು ನೀಡಲಾಗುತ್ತದೆ.ಅಲ್ಲದೆ
ಮಂಗಳೂರು ಮತ್ತು ಉಡುಪಿ ಪ್ರದೇಶಗಳ ಹಲಸಿನ ಹಣ್ಣಿನ ಆಹಾರ ಖಾದ್ಯಗಳು ಹಾಗೂ ಉತ್ಪನ್ನಗಳ ಮೇಲೆ ವಿಶೇಷ ಗಮನಹರಿಸಲಾಗುತ್ತದೆ. ಹಲಸಿನ ಹಣ್ಣು ಪ್ರಿಯರಿಗೆ ಇದೊಂದು ಹಬ್ಬವಾಗಲಿದ್ದು, ಸ್ಥಳೀಯವಾಗಿ ಪ್ರೇರಿತವಾದ ಖಾದ್ಯಗಳ ರುಚಿಯನ್ನು ಇಲ್ಲಿ ಉಣಬಡಿಸಲಾಗುತ್ತದೆ.

ನಂತರ ಮಾತನಾಡಿದ ಭಾಸ್ಕರ್ ರೈಯವರು ಈ ಹಲಸು ಹಬ್ಬದಲ್ಲಿ ಸಣ್ಣ ಕೈಗಾರಿಕೋದ್ಯಮಿಗಳಿಗೆ ತಾವು ಮಾಡಿರುವ ಉತ್ಪನ್ನಗಳನ್ನು ಮಾರಾಟ ಮಾಡುವುದರೊಂದಿಗೆ ತಮ್ಮ ಸೇವೆ ಪ್ರದರ್ಶಿಸಲು ಅವಕಾಶ ಸಿಗಲಿದೆ. ಸ್ಥಳೀಯ ವ್ಯವಹಾರಗಳು ಮೇಳದ ಪ್ರಮುಖ ಉದ್ದೇಶವಾಗಿದೆ.ಈ ಉತ್ಸವವು ಮುಂದಿನ ಪೀಳಿಗೆಯ ಉದ್ಯಮಿಗಳನ್ನು ಗುರುತಿಸುವುದು ಮತ್ತು ಪ್ರೋತಾಹವನ್ನು ಒದಗಿಸುವುದು, ನಾವೀನ್ಯತೆ ಮತ್ತು ಸ್ವಾವಲಂಬನೆಯ ಮನೋಭಾವವನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದರು.

ಹಬ್ಬದ ಉತ್ಸಾಹಕ್ಕೆ ಇಮ್ಮಡಿಗೊಳಿಸಲು ಸಂಜೆ 6 ರಿಂದ ಜನರನ್ನು ಆಕರ್ಷಿಸುವ ಸಲುವಾಗಿ ವಿವಿಧ ಆಟಗಳು, ಮೋಜಿನ ಚಟುವಟಿಕೆಗಳು ಸೇರಿದಂತೆ ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರತಿಭಾನ್ವಿತ
ವಿದ್ಯಾರ್ಥಿಗಳು ಮತ್ತು ಮಂಗಳೂರು ಸಿಟಿ ರೋಟರಾಕ್ಟ್ ಕ್ಲಬ್ನ ಸದಸ್ಯರು ಆಯೋಜಿಸುವ ಲೈವ್ ಓಪನ್ ಮೈಕ್ ಕಾರ್ಯಕ್ರಮವನ್ನು ಕೂಡಾ ಒಳಗೊಂಡಿರುತ್ತದೆ.

ಕುಡ್ಲ ಪೆಲಕಾಯಿ ಪರ್ಬವು ಕೇವಲ ಹಬ್ಬವಷ್ಟೇ ಅಲ್ಲ ಅದಕ್ಕೂ ಮಿಗಿಲಾದದ್ದು. ಇದು ಕರಾವಳಿಯ ಪರಂಪರೆಯನ್ನು, ನಮ್ಮ ಮೂಲವನ್ನು ಆಚರಿಸುವ, ರೈತರನ್ನು ಬೆಂಬಲಿಸುವ, ಸ್ಥಳೀಯ ವ್ಯಾಪಾರವನ್ನು ಉನ್ನತೀಕರಿಸುವ ಮತ್ತು ಆಹಾರ, ಸಂಸ್ಕೃತಿ ಮತ್ತು ಸಹಯೋಗದ ಮೂಲಕ ಸಮುದಾಯಗಳನ್ನು ಒಗ್ಗೂಡಿಸುವ ಒಂದು ಚಳವಳಿಯಾಗಿದೆ.
ಈ ಅಪರೂಪದ ಹಾಗೂ ಸಮಾಜವನ್ನು ಮತ್ತಷ್ಟು ಸಬಲೀಕರಣಗೊಳಿಸುವ ಕಾರ್ಯಕ್ರಮ ಇದಾಗಿದೆ.

