ಮಂಗಳೂರು : ಕರ್ನಾಟಕ ಮತ್ತು ಕೇರಳದಲ್ಲಿ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ನಾಯಕರೂ ಧಾರ್ಮಿಕ ವಿದ್ವಾಂಸರೂ ಆಗಿದ್ದ ಖಾಝಿ ಆಸ್ಸಯ್ಯಿದ್ ಉಮರುಲ್ ಫಾರೂಕ್ ಅಲ್ ಬುಖಾರಿ ಪೊಸೋಟ್ ತಂಙಳ್ ಅವರ ಹತ್ತನೇ ಉರೂಸ್ ಹಾಗೂ ಅವರು ಸ್ಥಾಪಿಸಿದ ಮಂಜೇಶ್ವರ ಹೊಸಂಗಡಿಯ ಮಳ್ ಹರ್ ವಿದ್ಯಾಸಂಸ್ಥೆಯ ರಜತ ಮಹೋತ್ಸವವು ಜೂನ್ 19ರಿಂದ 22ರ ತನಕ ನಡೆಯಲಿದೆ ಎಂದು ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜೂ. 19 ಗುರುವಾರ ಸಂಜೆ 4.30ಕ್ಕೆ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧ್ಯಕ್ಷ ಸಯ್ಯಿದ್ ಆಟಕೋಯ ತಂಙಳ್ ಕುಂಬೋಲ್ ಉದ್ಘಾಟಿಸಲಿದ್ದು, ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎಂ.ಕೆ.ಎಂ. ಅಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾತ್ರಿ 8ಕ್ಕೆ ಸಂಸ್ಥೆಯ ಮುಖ್ಯಸ್ಥ ಸಯ್ಯಿದ್ ಶಹೀರ್ ಅಲ್ ಬುಖಾರಿ ನೇತೃತ್ವದಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್ ನಲ್ಲಿ ಸಯ್ಯಿದ್ ಜಲಾಲುದ್ದೀನ್ ಸಅದಿ, ಸ್ವಾಲಿಹ್ ಸಅದಿ ತಳಿಪ್ಪರಂಬ, ಹಂಝ ಕೋಯ ಬಾಖವಿ ಭಾಗವಹಿಸುವರು.

ಜೂ. 20 ಶುಕ್ರವಾರ ಮಧ್ಯಾಹ್ನದಿಂದ ಆರಂಭಗೊಳ್ಳುವ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಯ್ಯದ್ ಬಾಯಾರ್ ತಂಙಳ್, ಸಯ್ಯಿದ್ ಕಲ್ಲಕಟ್ಟ ತಂಙಳ್, ಸಯ್ಯಿದ್ ಪಿ ಎಸ್ ಎ ತಂಙಳ್ ಬಾಹಸನ್ ನೇತೃತ್ವ ವಹಿಸುವರು.
ಜೂ 21 ಶನಿವಾರ 2 ಗಂಟೆಗೆ ಸಾಮಾಜಿಕ ಸಮಾವೇಶ ಮತ್ತು 7 ಗಂಟೆಗೆ ಸನದುದಾನ ಸಮಾರಂಭ ನಡೆಯಲಿದೆ. ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ರಈಸುಲ್ ಉಲಮಾ ಸುಲೈಮಾನ್ ಮುಸ್ಲಿಯಾರ್ ಪದವಿ ಪ್ರದಾನ ಮಾಡಲಿದ್ದು, ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಘಟಿಕೋತ್ಸವ ಭಾಷಣ ಮಾಡುವರು. ಇದೇ ವೇಳೆ ಸಯ್ಯಿದ್ ಪೊಸೋಟ್ ತಂಙಳ್ ಅವರು ಕರ್ನಾಟಕದ ಹಾವೇರಿಯಲ್ಲಿ ಸ್ಥಾಪಿಸಿದ ಮುಈನುಸ್ಸುನ್ನ ವಿದ್ಯಾಸಂಸ್ಥೆಯ ವತಿಯಿಂದ ನೀಡಲಾಗುವ ಸಾಧಕ ಪ್ರಶಸ್ತಿಯನ್ನು ಡಾ. ಫಾಝಿಲ್ ರಝ್ವಿ ಹಝ್ರತ್ ಕಾವಲಕಟ್ಟೆ ಅವರಿಗೆ ಪ್ರದಾನ ಮಾಡಲಾಗುವುದು.

ಜೂ 22 ರವಿವಾರ ಪೂರ್ವಾಹ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನ್ನದಾನದೊಂದಿಗೆ ಉರೂಸ್ ಕಾರ್ಯಕ್ರಮ ಸಮರೋಪಗೊಳ್ಳಲಿದೆ.
ಕೇರಳದ ಕಲ್ಲಿಕೋಟೆಯಿಂದ ಗಡಿನಾಡು ಹೊಸಂಗಡಿ ಬಳಿ ಪೊಸೋಟ್ ಎಂಬಲ್ಲಿಗೆ ಧರ್ಮಗುರುವಾಗಿ ಆಗಮಿಸಿದ್ದ ಪ್ರವಾದಿ ಕುಟುಂಬದ ಅನುಗ್ರಹೀತ ಪೌತ್ರ ಸಯ್ಯಿದ್ ಪೊಸೋಟ್ ತಂಙಳ್ ಅವರು ಕ್ರಿಶ. 2000ದಲ್ಲಿ ಮಳ್ ಹ ವಿದ್ಯಾಸಂಸ್ಥೆಯನ್ನು ಆರಂಭಿಸಿದ್ದರು. ಕೇವಲ ಹತ್ತು ವಿದ್ಯಾರ್ಥಿಗಳಿಂದ ಆರಂಭಗೊಂಡ ಸಂಸ್ಥೆಯು ಇಂದು 25 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಕೇರಳ ಅಲ್ಲದೆ, ಕರ್ನಾಟಕದ ಬಳ್ಳಾರಿ, ಕೋಟೆಕಾರ್, ಕಿನ್ನಿಗೋಳಿ, ಮಹಾರಾಷ್ಟ್ರದ ರತ್ನಗಿರಿ ಸೇರಿದಂತೆ 15 ಪ್ರದೇಶಗಳಲ್ಲಿ 35ರಷ್ಟು ವಿವಿಧ ಧಾರ್ಮಿಕ-ಲೌಕಿಕ ಶಿಕ್ಷಣಾಲಯಗಳು, ಮಹಿಳಾ ಕಾಲೇಜು, ವೃತ್ತಿ ತರಬೇತಿ ಸೇರಿದಂತೆ ಬಹುಮುಖ ವಿದ್ಯಾ ಕೇಂದ್ರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ಕನ್ನಡ ನಾಡಿಗೂ ತಮ್ಮ ಸೇವೆ ತಲುಪಬೇಕೆಂಬ ಉದ್ದೇಶದಿಂದ ಗಡಿನಾಡಿನಲ್ಲಿ ವಿದ್ಯಾಸಂಸ್ಥೆ ಆರಂಭಿಸಿದ ಸಯ್ಯಿದ್ ಪೊಸೋಟ್ ತಂಙಳ್, ಆಧ್ಯಾತ್ಮಿಕ ಚಿಕಿತ್ಸೆ, ಅಪಾರ ಪಾಂಡಿತ್ಯ, ವಿವಿಧ ಮೊಹಲ್ಲಾಗಳ ಖಾಝಿ ಪದವಿ, ವಿವಿಧ ಜನಸೇವಾ ಚಟುವಟಿಕೆಗಳ ಮೂಲಕ ನಾಡಿನ ಉದ್ದಗಲಕ್ಕೂ ಜನಾನುರಾಗಿಯಾಗಿದ್ದಾರೆ. ಮಹಾತ್ಮರು ಕೀರ್ತಿಶೇಷರಾಗಿ ದಶಕ ತುಂಬಿದ ಹಿನ್ನೆಲೆಯಲ್ಲಿ ಹತ್ತನೇ ಉರೂಸ್ ಕಾರ್ಯಕ್ರಮವನ್ನು ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ನಡೆಸಲಾಗುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ:ಸಯ್ಯದ್ ಜಲಾಲುದ್ದೀನ್ ಬುಖಾರಿ ತಂಬಳ್ (ಪ್ರಧಾನ ಕಾರ್ಯದರ್ಶಿ, ಮಳಹರ್ ವಿದ್ಯಾಸಂಸ್ಥೆ) ಹಾಜಿ ಮುಹಮ್ಮದ್ ಸಾಗರ (ಅಧ್ಯಕ್ಷರು, ಮಳಹರ್ ಕರ್ನಾಟಕ ಪ್ರಚಾರ ಸಮಿತಿ), ಅಡ್ವಕೇಟ್ ಹಸನ್ ಕುಂಞ (ಮ್ಯಾನೇಜರ್, ಮಳ ಹರ್ ವಿದ್ಯಾಸಂಸ್ಥೆ)
ಅಬೂಸ್ವಾಲಿಹ್ ಗೇರುಕಟ್ಟೆ (ಕಾರ್ಯದರ್ಶಿ, ಮಳ ಕರ್ನಾಟಕ ಪ್ರಚಾರ ಸಮಿತಿ) ರಹೀಂ ಸಅದಿ ಕತಾರ್ (ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್) ಅಬ್ದುಲ್ ರಶೀದ್ ಮಡಂತ್ಯಾರು (ರಾಜ್ಯ ಕಾರ್ಯದರ್ಶಿ, ಎಸ್.ಎಸ್.ಎಫ್) ಉಪಸ್ಥಿತರಿದ್ದರು.

