ಮಂಗಳೂರು :ಸನಾತನ ಯಕ್ಷಾಲಯ (ರಿ.) ಮಂಗಳೂರು ಇದರ 16ನೇ ವರುಷದ ವಾರ್ಷಿಕೋತ್ಸವವನ್ನು ದಿನಾಂಕ 22 ರಂದು ಮಂಗಳೂರಿನ ಪುರಭವನದಲ್ಲಿ ಆಚರಿಸಲಾಗುವುದು ಎಂದು ಜಯಪ್ರಕಾಶ್ ಹೆಬ್ಬಾರ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸನಾತನ ಯಕ್ಷಾಲಯದ ಗುರುಗಳಾದ ರಾಕೇಶ್ ರೈ ಅಡ್ಕರವರು ಮುಂಬೈ ಮತ್ತು ಮಂಗಳೂರಿನಲ್ಲಿ ಉತ್ತಮ ಉದ್ಯೋಗದಲ್ಲಿದ್ದರೂ ಕೂಡಾ ಯಕ್ಷಗಾನ ಕಲೆಯ ಅದಮ್ಯ ಸೆಳೆತಕ್ಕೊಳಗಾಗಿ ಯಕ್ಷಗಾನಕ್ಕೆ ತನ್ನಿಂದಾಗುವ ಸೇವೆಯನ್ನು ಸಲ್ಲಿಸಬೇಕೆಂಬ ಉದ್ದೇಶದಿಂದ ಉದ್ಯೋಗವನ್ನು ತ್ಯಜಿಸಿ, ಸರಿಸುಮಾರು 16 ವರ್ಷಗಳ ಹಿಂದೆ ಮಂಗಳೂರಿನ ಅತ್ತಾವರದ ಪಾರ್ವತಿ ಕುಟೀರದಲ್ಲಿ “ಸನಾತನ ಯಕ್ಷಾಲಯ” ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ, ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯಾಭ್ಯಾಸವನ್ನು ಪ್ರಾರಂಭಿಸಿದರು.
ಯಕ್ಷ ಶಿಕ್ಷಣ ನೀಡುವುದಕ್ಕೆ ಬೇಕಾಗಿ ಅದೆಷ್ಟೋ ಕಡೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಕೇವಲ ನಾಟ್ಯವನ್ನು ಮಾತ್ರವಲ್ಲದೆ, ವೇಷಭೂಷಣವನ್ನು ಕಟ್ಟುವ ಬಗೆ, ಅರ್ಥಗಾರಿಕೆ, ಮುಖವರ್ಣಿಕೆಯ ತರಗತಿಗಳನ್ನು ಕೂಡಾ ನಡೆಸುತ್ತಾ ಬಂದು, ಶಿಷ್ಯರಿಗೆ ಉತ್ತಮ ಗುಣಮಟ್ಟದ ಯಕ್ಷ ಶಿಕ್ಷಣವನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಬೋಧಿಸುವ ಅಪರೂಪದ ಗುರುಗಳಾಗಿರುವರು. “ಸನಾತನ ಯಕ್ಷಾಲಯ” ಸಂಸ್ಥೆಯಲ್ಲಿ 6 ವರ್ಷದ ಮಗುವಿನಿಂದ ಹಿಡಿದು 65 ವರ್ಷದ ಹಿರಿಯರವರೆಗೂ ಯಕ್ಷ ಶಿಕ್ಷಣವನ್ನು ರಾಕೇಶ್ ರೈ ಅಡ್ಕರಿಂದ ಕಲಿಯುತ್ತಿದ್ದಾರೆ.

ಪ್ರಸ್ತುತ ರಾಕೇಶ್ ರೈಯವರು ದಕ್ಷಿಣಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ 16 ಕಡೆ ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವುದಲ್ಲದೆ, 700ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ನಾಟ್ಯ, ಬಣ್ಣಗಾರಿಕೆ ಮತ್ತು ಪ್ರಸಾದನಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ತರಬೇತಿಯನ್ನು ಪೂರ್ಣಗೊಳಿಸಿ ಪರಿಪೂರ್ಣ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡುತ್ತಿರುವುದು ಸಂತೋಷದ ವಿಷಯ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಯಕ್ಷಗಾನ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಇದರ ಪ್ರಯೋಜನವನ್ನು 70ಕ್ಕೂ ಹೆಚ್ಚು ಮಂದಿ ಪಡೆದುಕೊಂಡಿದ್ದಾರೆ.

ಈಗಲೂ ಪರವೂರಿನಲ್ಲಿರುವ ಯಕ್ಷಗಾನ ಕಲಿಯುವ ಆಸಕ್ತರಿಗೆ ಆನ್ಲೈನ್ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದಾರೆ.ಕಳೆದ 15 ವರ್ಷಗಳಿಂದ ಹಲವಾರು ಕಡೆಗಳಲ್ಲಿ ಗುಣಮಟ್ಟದ ಹಿಮ್ಮೇಳದೊಂದಿಗೆ ಯಶಸ್ವಿ ಪ್ರದರ್ಶನವನ್ನು ನೀಡುತ್ತಾ ಬಂದಿರುವ ಇವರ ಯಕ್ಷ ವಿದ್ಯಾರ್ಥಿಗಳ ಪ್ರತಿಭೆಗಳು ಅಪಾರ. ಪ್ರತೀವರ್ಷವೂ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಬೇರೆ ಬೇರೆ ಕಡೆಗಳಲ್ಲಿ ಪೌರಾಣಿಕ ಯಕ್ಷಗಾನ ಪ್ರಸಂಗಗಳ ಮೂಲಕ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭಗಳಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ಕಲೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರತಿಭಾವಂತರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರಥಮ ವರ್ಷದಿಂದ ಇಂದಿನವರೆಗೂ ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿದೆ.

ತನ್ನ ಹದಿನೈದನೇ ವಾರ್ಷಿಕೋತ್ಸವವನ್ನು ವಿಶಿಷ್ಟ ರೀತಿಯಲ್ಲಿ “ಜೋಡಾಟದ ಮೂಲಕ ಸುಮಾರು 140 ಶಿಷ್ಯರನ್ನೊಳಗೊಂಡು ಮಂಗಳೂರಿನ ಪುರಭವನದಲ್ಲಿ “ಶ್ರೀದೇವಿ ಮಹಾತ್ಮ” ಎಂಬ ಪ್ರಸಂಗವನ್ನು ಪ್ರದರ್ಶಿಸಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸನಾತನ ಯಕ್ಷಾಲಯ ಸಂಸ್ಥೆಯು ತನ್ನ ಹದಿನಾರನೇ ವಾರ್ಷಿಕೋತ್ಸವವನ್ನು ಜೂನ್ 22ನೇ ತಾರೀಕು ಆದಿತ್ಯವಾರ ಮಂಗಳೂರಿನ ಪುರಭವನದಲ್ಲಿ ಆಚರಿಸಲಿದೆ. ಮಧ್ಯಾಹ್ನ 2.30 ರಿಂದ 3.30ರ ತನಕ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮುಖವರ್ಣಿಕೆ ಸ್ಪರ್ಧೆಯನ್ನು ಆಯೋಜಿಸಿದೆ. ಸಂಜೆ 4.00 ರಿಂದ 5.30ರ ತನಕ ಕವಿ ಮುದ್ದಣ ವಿರಚಿತ “ರತ್ನಾವತಿ ಕಲ್ಯಾಣ” ಮತ್ತು ಸಂಜೆ 7.00ರಿಂದ 9.00ರ ತನಕ “ಕುಮಾರ ವಿಜಯ್” ಪ್ರಸಂಗವನ್ನು ಪ್ರದರ್ಶಿಸಲಿದೆ. ಸಂಜೆ 5.30ರಿಂದ 7.00 ತನಕ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾರಂಗ ಉಡುಪಿ ಇದರ ಕಾರ್ಯದರ್ಶಿಗಳಾದ ಶ್ರೀ ಮುರಳಿ ಕಡೇಕಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಾಮಂಜೂರು ಶ್ರೀ ಅಮೃತೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸ್ಥಾಪಕರಾದ ಶ್ರೀ ಸೀತಾರಾಮ ಜಾಣು ಶೆಟ್ಟಿ, ಪಾವಂಜೆ ನಾಗವ್ರಜ ಕ್ಷೇತ್ರ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶಶೀಂದ್ರ ಕುಮಾರ್, ಮುಂಬಯಿಯ ಶ್ರೀ ಗಾಂವ್ ದೇವಿ ಶ್ರೀ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಜ್ಯೋತಿಷಿಗಳಾದ ಶ್ರೀ ಪೆರ್ಣಂಕಿಲ ಹರಿದಾಸ ಭಟ್, ಕೊಪ್ಪಲಕಾಡು ಶ್ರೀದೇವಿ ಕನ್ಸ್ಟ್ರಕ್ಷನ್ ಕೊಂಚಾಡಿಯ ಮಾಲಕರಾದ ಶ್ರೀ ವೆಂಕಟೇಶ್ ಯೆಯ್ಯಾಡಿ, ಮೊಂಡೆಲೇಜ್ಹ್ ಇಂಟರ್ ನ್ಯಾಷನಲ್ನ ಸೀನಿಯರ್ ಮ್ಯಾನೇಜರ್ ಶ್ರೀ ಸಂತೋಷ್ ಕುಮಾರ್ ಎಸ್. ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಕೇಶ್ ರೈ ,ಲೀಲಾಧರ್ ಶೆಟ್ಟಿ, ನಾರಾಯಣ ಶೆಟ್ಟಿ, ಸುಕನ್ಯಾ ಶೇಖರ್,ಸ್ನೇಹಾ ಮೊದಲಾದವರು ಉಪಸ್ಥಿತರಿದ್ದರು

