ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯ ಗೊಳಿಸಲಾಗುತ್ತಿದೆ. ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಈಗಾಗಲೇ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದ್ದು ಇದೀಗ ಮುರುಡೇಶ್ವರದ ಶಿವ ದೇವಸ್ಥಾನದ ದರ್ಶನಕ್ಕೆ ಬರುವ ಭಕ್ತರು ವಸ್ತ್ರ ಸಂಹಿತೆ ನಿಯಮ ಪಾಲಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಭಾನುವಾರ ಸೂಚನೆ ಹೊರಡಿಸಲಾಗಿದೆ.

ಈ ಕುರಿತು ಭಕ್ತರು ವಸ್ತ್ರಸಂಹಿತೆ ಪಾಲಿಸುವಂತೆ ವಿನಂತಿಸಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಬ್ಯಾನರ್ ಹಾಕಲಾಗಿದೆ.ಮುರುಡೇಶ್ವರ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದ್ದು ಲಕ್ಷಾಂತರ ಜನ ಪ್ರವಾಸಿಗರು ಮುರುಡೇಶ್ವರಕ್ಕೆ ಭೇಟಿ ನೀಡುತ್ತಾರೆ.ಇಲ್ಲಿನ ಜಲಸಾಹಸ ಕ್ರೀಡೆ, ಸ್ಕೂಬಾ ಡೈವ್ ಗಳು ಪ್ರಸಿದ್ಧವಾಗಿದ್ದು ,ಬೃಹತ್ ಶಿವನ ಮೂರ್ತಿ ವಿಶ್ವ ಪ್ರಸಿದ್ಧಿ ಪಡೆದಿದೆ.

ಇನ್ನು ಇಲ್ಲಿಗೆ ಬರುವ ಪ್ರವಾಸಿಗರು ಕಡಲ ತೀರಕ್ಕೆ ಭೇಟಿ ನೀಡಿದ ನಂತರ ಶಿವನ ದೇವಾಲಯಕ್ಕೂ ಭೇಟಿ ನೀಡುತ್ತಾರೆ .ಈ ವೇಳೆ ಪುರುಷರು ಚಡ್ಡಿ,ಬನಿಯನ್ ನಲ್ಲಿ ಬಂದರೇ ಮಹಿಳೆಯರು ಸಹ ಧಾರ್ಮಿಕ ಸ್ಥಳದಲ್ಲಿ ಧರಿಸಬೇಕಾದ ವಸ್ತ್ರ ಧರಿಸದೇ ಅಸಭ್ಯ ರೀತಿಯಲ್ಲಿ ದೇವರ ದರ್ಶನಕ್ಕೆ ಬರುತ್ತಿದ್ದು ,ಆಸ್ತಿಕ ಭಕ್ತರು ಈ ಬಗ್ಗೆ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿ ತರುವಂತೆ ಮನವಿ ಮಾಡಿದ್ದರು.ಪುರುಷರು–ಅಂಗಿ ಧೋತಿ, ಪ್ಯಾಂಟ್ ಮತ್ತು ಕುರ್ತಾ ಪೈಜಾಮ, ಮಹಿಳೆಯರು–ಸೀರೆ, ಚೂಡಿದಾರ ಧರಿಸಿ ದೇವರ ದರ್ಶನ ಮಾಡಬಹುದೆಂದು ತಿಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ , ‘ಮುರುಡೇಶ್ವರನ ಸನ್ನಿಧಿಯಲ್ಲಿ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ದೇವರ ದರ್ಶನ ಮಾಡುವ ಭಕ್ತಾಧಿಗಳಿಗೆ ವಸ್ತ್ರಸಂಹಿತೆ ನಿಯಮ ಪಾಲಿಸುವಂತೆ ವಿನಂತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಕ್ತರ ಸ್ಪಂದನೆ ನೋಡಿ ಈ ನಿಯಮವನ್ನು ಕಡ್ಡಾಯಗೊಳಿಸಲಾವುದು’ ಎಂದರು.
ದೇವಸ್ಥಾನದ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಆಗ್ರಹಿಸಿ 2022ರ ಡಿಸೆಂಬರ್ ನಲ್ಲಿ ಸನಾತನ ಹಿಂದೂ ಜನಜಾಗೃತಿ ಸಮಿತಿ ಸ್ಥಳೀಯ ಘಟಕ ಮತ್ತು ವಿವಿಧ ಹಿಂದೂ ಪರ ಸಂಘಟನೆ ವತಿಯಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿತ್ತು.

