ಕೋಲ್ಕತ್ತಾ ಹೈಕೋರ್ಟ್ ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಪರಿತ್ಯಕ್ತ ಪತ್ನಿ ಹಸಿನ್ ಜಹಾನ್ ಮತ್ತು ಮಗಳು ಆಯಿರಾಗೆ ಪ್ರತಿ ತಿಂಗಳು ₹ 4 ಲಕ್ಷ ಪಾವತಿಸಬೇಕೆಂದು ಆದೇಶಿಸಿದೆ.

ಹಸಿನ್ ಜಹಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ್ ಕುಮಾರ್ ಮುಖರ್ಜಿ ಅವರ ಪೀಠ, ಭಾರತೀಯ ಕ್ರಿಕೆಟಿಗ ಶಮಿ ಅವರ ಪತ್ನಿ ಹಸನ್ ಜಹಾನ್ ಗೆ ಮಾಸಿಕ ₹ 1.5 ಲಕ್ಷ ಮತ್ತು ಮಗಳಿಗೆ ₹ 2.5 ಲಕ್ಷ ಪಾವತಿಸುವಂತೆ ಆದೇಶಿಸಿದೆ.

ಮೊಹಮ್ಮದ್ ಶಮಿ ಅವರ ಪತ್ನಿ ಹಸನ್ ಜಹಾನ್ ಮತ್ತು ಮಗಳು ಆಯಿರಾ ಅವರಿಂದ ಬೇರ್ಪಟ್ಟ ಪ್ರಕರಣದ ಕುರಿತು ಕೊಲ್ಕತ್ತಾ ಹೈಕೋರ್ಟ್ ತೀರ್ಪು ಪ್ರಕಟಿಸಿದ ನಂತರ ಶಮಿ ಅವರಿಗೆ ದೊಡ್ಡ ಹಿನ್ನಡೆಯಾಗಿದೆ ಪತ್ನಿ ಹಸನ್ ಜಹಾನ್ ಅವರು ನ್ಯಾಯಾಲಯದ ಮುಂದೆ ತನಗಾಗಿ ತಿಂಗಳಿಗೆ ₹ 7 ಲಕ್ಷ ಮತ್ತು ತನ್ನ ಮಗಳಿಗೆ ₹ 3 ಲಕ್ಷ ಪರಿಹಾರವನ್ನು ಕೋರಿದ್ದರು

2023 ರಲ್ಲಿ ಶಮಿ ತನ್ನ ಪತ್ನಿಗೆ ₹ 50,000 ಮತ್ತು ಮಗಳಿಗೆ ₹ 80,000 ಪಾವತಿಸಬೇಕೆಂದು ನಿರ್ದೇಶಿಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಹಸನ್ ಜಹಾನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಪತ್ನಿ ಹಾಗು ಮಗಳಿಗೆ ತಿಂಗಳಿಗೆ ಒಟ್ಟು 4ಲಕ್ಷ ರೂ ನೀಡಲು ಆದೇಶಿಸಿದೆ.ಅಲ್ಲದೆ ಶಮಿ ಬಯಸಿದರೆ ತನ್ನ ಮಗಳ ಶಿಕ್ಷಣ ಮತ್ತು ಇತರ ವೆಚ್ಚಗಳಿಗೆ ಹೆಚ್ಚಿನ ಹಣವನ್ನು ನೀಡಬಹುದು ಎಂದು ನ್ಯಾಯಾಲಯ ತಿಳಿಸಿದೆ.

2014 ರಲ್ಲಿ ಶಮಿ ಅವರನ್ನು ವಿವಾಹವಾಗುವ ಮೊದಲು ಹಸನ್ ಜಹಾನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮಾಡೆಲ್ ಮತ್ತು ಚಿಯರ್ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ದಂಪತಿಗಳು 2015 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.

2018 ರಲ್ಲಿ, ಶಮಿ ವಿರುದ್ಧ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು. ಶಮಿ ಪಾಕಿಸ್ತಾನಿ ಮಹಿಳೆಯಿಂದ ಹಣ ಪಡೆದಿದ್ದಾರೆ ಎಂದು ಅವರು ಹೇಳಿಕೊಂಡಿದ್ದರು. ತನ್ನ ಕುಟುಂಬದ ಖರ್ಚುಗಳನ್ನು ನಿಭಾಯಿಸಲು ತನ್ನ ಪತಿ ತನಗೆ ಹಣ ಪಾವತಿಸುವುದನ್ನು ನಿಲ್ಲಿಸಿದ್ದಾರೆ ಎಂದು ಜಹಾನ್ ಆರೋಪಿಸಿದ್ದರು.


