ತಿರುವನಂತಪುರಂ : ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ಅವರ ಪುತ್ರಿ, ಮಾಯಾ ಎಂದೇ ಜನಪ್ರಿಯರಾಗಿರುವ ವಿಸ್ಮಯ ಮೋಹನ್ ಲಾಲ್ ನಟನೆಗೆ ಪಾದಾರ್ಪಣೆ ಮಾಡಲಿದ್ದು, ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಾರೆಯೇ ಎಂಬ ಹಲವು ವರ್ಷಗಳ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.

ಮಲಯಾಳಂ ಸಿನಿಮಾದ ಐಕಾನ್ ಮೋಹನ್ ಲಾಲ್ ಅವರ ಪುತ್ರಿ ವಿಸ್ಮಯ ಮೋಹನ್ ಲಾಲ್, ಜೂಡ್ ಅಂಥೋನಿ ಜೋಸೆಫ್ ಕಥೆ ಬರೆದು ನಿರ್ದೇಶಿಸಲಿರುವ ‘ತುಡಕ್ಕಂ’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ.

ಈ ಚಿತ್ರವನ್ನು ಆಶಿರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಥೋನಿ ಪೆರುಂಬವೂರ್ ನಿರ್ಮಿಸಲಿದ್ದಾರೆ, ಇದು ಅವರ 37 ನೇ ಚಿತ್ರವಾಗಿದೆ. ತುಡಕ್ಕಂ ಅಂದರೆ ಆರಂಭ.

ಬರವಣಿಗೆ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ವಿಸ್ಮಯ ಮೋಹನ್ ಲಾಲ್ ಇಲ್ಲಿಯವರೆಗೆ ತೆರೆಮರೆಯಲ್ಲಿ ಉಳಿದಿದ್ದರು ಬಹಳ ವರ್ಷದಿಂದ ತಮ್ಮನ್ನು ತಾವು ಬಹಿರಂಗಪಡಿಸಿಕೊಳ್ಳುತ್ತಿಲ್ಲ. ಅವರ ನಟನಾ ಅವಕಾಶಗಳ ಬಗ್ಗೆ ತಂದೆ ಮೋಹನ್ ಲಾಲ್ ಅವರನ್ನು ಕೇಳಿದಾಗಲೆಲ್ಲಾ ಸಾಮಾನ್ಯವಾಗಿ “ಇದು ಅವರ ನಿರ್ಧಾರ; ಅವರು ತನಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವಷ್ಟು ಪ್ರಬುದ್ಧರು” ಎಂದು ಉತ್ತರಿಸುತ್ತಿದ್ದರು.

ಈಗಾಗಲೇ ಆಶೀರ್ವಾದ ಸಿನೆಮಾನ್ ನವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ನ್ನು ಹಾಕಿದ್ದು “ವಿಸ್ಮಯ ಮೋಹನ್ ಲಾಲ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಲು ಆಶೀರ್ವಾದ್ ಸಿನಿಮಾಸ್ ಅಪಾರ ಹೆಮ್ಮೆ ಮತ್ತು ಗೌರವವನ್ನು ಹೊಂದಿದೆ. ಹೆಮ್ಮೆಯಿಂದ ತುಂಬಿದ ಹೃದಯಗಳು ಮತ್ತು ದಿಗಂತದ ಮೇಲೆ ಕಣ್ಣುಗಳನ್ನು ಇರಿಸಿ, ನಾವು ಹೊಸ ಧ್ವನಿ, ಹೊಸ ದೃಷ್ಟಿ ಮತ್ತು ಪ್ರಕಾಶಮಾನವಾದ ಹೊಸ ಅಧ್ಯಾಯದ ಉದಯವನ್ನು ಅನಾವರಣಗೊಳಿಸುತ್ತೇವೆ. ಕಥೆಗಳಿಂದ ಹೆಣೆಯಲ್ಪಟ್ಟ ಜಗತ್ತಿನಲ್ಲಿ, ಕಥೆಗಾರನು ನೆರಳುಗಳಿಂದಲ್ಲ, ಬೆಳಕಿನಿಂದ ಹೊರಹೊಮ್ಮುತ್ತಾನೆ. ವಿಸ್ಮಯ ಮೋಹನ್ ಲಾಲ್ಗೆ ಸ್ವಾಗತ” ಎಂದು ಬರೆದಿದೆ.

ಮೋಹನ್ ಲಾಲ್ ಅವರ ಮಗ ಪ್ರಣವ್ ಈಗಾಗಲೇ ಕೆಲವು ಹಿಟ್ ಚಿತ್ರಗಳೊಂದಿಗೆ ಛಾಪು ಮೂಡಿಸಿದ್ದಾರೆ. ಆಂಥೋನಿ ಪೆರುಂಬವೂರ್ ಅವರು 2000 ರಲ್ಲಿ ಮೋಹನ್ ಲಾಲ್ ಅವರಿಂದ ಕಾಲ್ ಶೀಟ್ ಪಡೆದು ಬ್ಲಾಕ್ ಬಾಸ್ಟರ್ ಚಿತ್ರ ನರಸಿಂಹಂ ಅನ್ನು ನಿರ್ಮಿಸಿದರು,ಅದು ಮಲಯಾಳಂ ಚಿತ್ರರಂಗದ ಅತಿದೊಡ್ಡ ಯಶಸ್ವಿ ಚಿತ್ರವಾಗಿತ್ತು.

ಮಲಯಾಳಂ ಚಿತ್ರರಂಗದಲ್ಲಿ ಇದೀಗ ಸ್ಟಾರ್ ನಟ ನಟಿಯರ ಮಕ್ಕಳೇ ಸದ್ದು ಮಾಡುತ್ತಿದ್ದಾರೆ.ವಿಸ್ಮಯ ಅವರ ಪ್ರವೇಶವು ಚಿತ್ರರಂಗಕ್ಕೆ ಬರುವ ಸ್ಟಾರ್ ಮಕ್ಕಳ ಪ್ರವೃತ್ತಿಯನ್ನು ಹೆಚ್ಚಿಸುತ್ತಿದೆ. ಈ ಪಟ್ಟಿಯಲ್ಲಿ ಪ್ರಮುಖ ಹೆಸರುಗಳಲ್ಲಿ ಮಮ್ಮುಟ್ಟಿ ಅವರ ಮಗ ದುಲ್ಕರ್ ಸಲ್ಮಾನ್, ಜಯರಾಮ್ ಅವರ ಮಗ ಕಾಳಿದಾಸ್ ಜಯರಾಮ್, ಕೇಂದ್ರ ಸಚಿವ ಸುರೇಶ್ ಗೋಪಿ ಅವರ ಮಗ ಗೋಕುಲ್ ಸುರೇಶ್, ನಿರ್ದೇಶಕ ಫಾಜಿಲ್ ಅವರ ಮಗ ಫಹಾದ್ ಫಾಸಿಲ್, ನಿರ್ಮಾಪಕ ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಅವರ ಮಗಳು ಕೀರ್ತಿ ಸುರೇಶ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಮತ್ತು ನಟ ದಂಪತಿ ಮನೋಜ್ ಕೆ. ಜಯನ್ ಮತ್ತು ಉರ್ವಶಿ ಅವರ ಪುತ್ರಿಯರು ಸೇರಿದ್ದಾರೆ.



