ಮಂಗಳೂರು : ಕರಾವಳಿಯ ಪ್ರತಿಷ್ಟಿತ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘಟನೆಯಾದ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಟಾನದ 17ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಇದೇ ಬರುವ ದಿನಾಂಕ 7 ರಂದು ಸಂಜೆ 5.30 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ ‘ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ ಎಂದು ಮಂಡಳಿಯ ಸದಸ್ಯರಾದ ಮೈಮ್ ರಾಮದಾಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು ‘ಅಗರಿ ಶ್ರೀನಿವಾಸ ಭಾಗವತ’ ವೇದಿಕೆಯಲ್ಲಿ ಜರಗಲಿದೆ. 2008 ರಲ್ಲಿ ಪ್ರಾರಂಭವಾದ ರಂಗಸಂಗಾತಿ ಸಾಂಸ್ಕೃತಿಕ ಸಂಘಟನೆ ಸಮಾನ ಮನಸ್ಕರು ಸೇರಿ ಕಟ್ಟಿದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿದೆ.ಈ ಸಂಸ್ಥೆಯ ಮೂಲಕ ಬರ್ಬರಿಕ, ನೆಮ್ಮದಿ ಅಪಾರ್ಟ್ಮೆಂಟ್, ಮರಗಿಡಬಳ್ಳಿ, ಕೇಳೇಸಖೀ ಚಂದ್ರಮುಖಿ, ದಾಟ್ಸ್ ಆಲ್ ಯುವರ್ ಆನರ್, ಸಂಪಿಗೆ ನಗರ ಪೋಲೀಸ್ ಸ್ಟೇಶನ್, ಮಿನುಗೆಲೆ ಮಿನುಗೆಲೆ ನಕ್ಷತ್ರ ಮುಂತಾದ ನಾಟಕಗಳ ಪ್ರದರ್ಶನ, ಪ್ರತೀ ವರ್ಷ ಫೆಬ್ರವರಿ 14ಕ್ಕೆ ಪುಸ್ತಕ ಪ್ರೇಮಿಗಳ ದಿನಾಚರಣೆ, ದಿ.ಕುಂಬ್ಳೆ ಸುಂದರ ರಾವ್ ರವರ ನೆನಪಿನಲ್ಲಿ ‘ಕುಂಬ್ಳೆ ಪ್ರಶಸ್ತಿ’ ಕಾರ್ಯಕ್ರಮ, ದಿ.ಬೈಕಾಡಿ ಜನಾರ್ಧನ ಆಚಾರ್ ರವರ ನೆನಪಿನಲ್ಲಿ ಬೈಕಾಡಿ ಪ್ರತಿಷ್ಟಾನದ ಸಹಯೋಗದೊಂದಿಗೆ ಬೈಕಾಡಿ ಪ್ರಶಸ್ತಿ ಮತ್ತು ಮಕ್ಕಳ ನಾಟಕ ಪ್ರದರ್ಶನ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿರುವ ಕ್ರಿಯಾಶೀಲ ಸಂಘಟನೆ, ನಾಟಕ ಕಾರ್ಯಾಗಾರ, ಪುಸ್ತಕ ಬಿಡುಗಡೆ ಕಾರ್ಯಕ್ರಮ, ವಿಚಾರ ಗೋಷ್ಟಿ,ಆಶ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವುದನ್ನೂ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ ಎಂದು ರಾಮದಾಸ್ ಹೇಳಿದರು.

ನಂತರ ಮಾತನಾಡಿದ ಶಶಿರಾಜ್ ಕಾವೂರವರು ಬಹುಮುಖ ಪ್ರತಿಭೆ, ರಂಗಸಂಗಾತಿಯ ಸ್ಥಾಪಕ ಸದಸ್ಯ ದಿವಂಗತ ಭಾಸ್ಕರ ನೆಲ್ಲಿತೀರ್ಥ ರವರ ಸವಿನೆನಪಲ್ಲಿ ನೀಡಲಾಗುವ ರಂಗ ಭಾಸ್ಕರ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದ್ದು ಈ ಬಾರಿಯ ಪ್ರಶಸ್ತಿಯನ್ನು ಹಿರಿಯ ನಟ, ನಿರ್ದೇಶಕ, ಚಲನಚಿತ್ರ ನಟ ಶ್ರೀ ಲಕ್ಷ್ಮಣ ಕುಮಾರ್ ಮಲ್ಲೂರು ರವರಿಗೆ ರಂಗಭಾಸ್ಕರ-2025 ಪ್ರದಾನ ಮಾಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಉಡುಪಿಯ ಕಲಾಪೋಷಕ ಮತ್ತು ರಂಗಪ್ರೇಮಿ ಶ್ರೀ ಉಡುಪಿಯ ಕಲಾ ಪೋಷಕ ರಂಗಪ್ರೇಮಿ ಶ್ರೀ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿಸುತ್ತಿದ್ದಾರೆ ಎಂದರು.
ಲಕ್ಷ್ಮಣ ಕುಮಾರ್ ಮಲ್ಲೂರುರವರು 1962 ರಲ್ಲಿ ಬಾಲನಟನಾಗಿ ರಂಗ ಪ್ರವೇಶ ಮಾಡಿದರು ಕಳೆದ 65 ವರ್ಷಗಳಿಂದ ನಿರಂತರ ರಂಗ ಚಟುವಟಿಕೆಗಳಿಂದ ನಟನಾಗಿ ನಿರ್ದೇಶಕನಾಗಿ, ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

ಒರಿಯೆ ಮಗೆ ನಾಟಕ ನಿರ್ದೇಶನ, ಒರಿಯರ್ದೊರಿ ಅಸಲ್, ಒಂಜಿ ನಿಮಿಷ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಣೆ, ಧೈರ್ಯಗೊಂಜಿ ದೇವೆರ್, ಕೋಟಿ ಚೆನ್ನಯ, ಪರಬಗ್ ಪೋಪಿಕಾಲ, ಅಜ್ಜಿ ಸಾಂಕಿದಿ ಪುಳ್ಳಿ, ಕಲಂಕ್ದಿ ನೀರ್, ಮುಂತಾದ ತುಳು ನಾಟಕ, ಆಷಾಡದ ಒಂದು ದಿನ, ತುಘಲಕ್, ಜೈಸಿದನಾಯ್ಕ, ಉರುಳು, ಕೋರ್ಟ್ ಮಾರ್ಶಲ್, ಊರೆಲ್ಲಾ ಹೇಳ್ಬೇಡಿ, ದಿವ್ಯದರ್ಶನ, ಮಳೆ ನಿಲ್ಲುವವರೆಗೆ ಮುಂತಾದ ಕನ್ನಡ ನಾಟಕಗಳಲ್ಲಿ ಅದ್ಭುತ ಅಭಿನಯ ನೀಡಿ ಮನೆಮಾತಾಗಿದ್ದಾರೆ. ಬಂಗಾರ್ ಪಟ್ಲೇರ್, ಚಾಲಿಪೋಲಿಲು, ಜಬರ್ದಸ್ತ್ ಶಂಕರ ಮುಂತಾಗಿ 30 ಕ್ಕೂ ಹೆಚ್ಚು ಕನ್ನಡ, ತುಳು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಧಾರಾವಾಹಿಯಲ್ಲೂ, ಕಿರುಚಿತ್ರಗಳಲ್ಲೂ ಜಾಹೀರಾತುಗಳಲ್ಲೂ ತಮ್ಮ ಅಭಿಯನ ಸಾಮರ್ಥ್ಯವನ್ನು ಮೆರೆದಿದ್ದಾರೆ.

2015 ರಲ್ಲಿ ಆರಂಭವಾದ ‘ರಂಗ ಭಾಸ್ಕರ ಪ್ರಶಸ್ತಿಯನ್ನು ಈ ಹಿಂದೆ ವೇಣುಮಿತ್ರ ಕಾಸರಗೋಡು(2015), ವಿಟ್ಲ ಮಂಗೇಶ್ ಭಟ್ (2016), ಶ್ರೀಮತಿ ರೋಹಿಣಿ ಜಗರಾಮ್ (2017), ಜಗನ್ ಪವಾರ್ ಬೇಕಲ್ (2018), ಐ.ಕೆ.ಬೊಳುವಾರು(2019), ಕಾಸರಗೋಡು ಚಿನ್ನ(2020), ಗಣೇಶ ಕೊಲೆಕಾಡಿ(2021), ಕೆ.ರಾಧಾಕೃಷ್ಣ(2022), ಡಾ.ಎಂ.ಗಣೇಶ್ ಹೆಗ್ಗೋಡು(2023) ನವೀನ್ ಪಡೀಲ್ (2024) ರವರಿಗೆ ಕೊಡಲಾಗಿದೆ.
ಕಾರ್ಯಕ್ರಮವನ್ನು ಡಾ.ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರು ನಡೆಸಿಕೊಡಲಿದ್ದಾರೆ. ಹಿರಿಯ ಜನಪದ ವಿದ್ವಾಂಸರಾದ ಡಾ.ಬಿ.ಎ.ವಿವೇಕ ರೈಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ರಂಗ ನಿರ್ದೆಶಕ ವಿಜಯಕುಮಾರ್ ಕೊಡಿಯಾಲ್ಬೈಲ್, ಡಾ.ಆಲ್ವಿನ್ ಡೇಸಾ, ಶ್ರೀ ಪುಂಡಲೀಕ ಹೊಸಬೆಟ್ಟು, ಶ್ರೀ ಸಂತೋಷ್ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದಾರೆ.

ಸಭಾಕಾರ್ಯಕ್ರಮದ ನಂತರ ಹೆಗ್ಗೋಡಿನ ಜನಮನದಾಟ ತಂಡದಿಂಡ ಎರಡು ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಾಯಾಮೃಗ (ನಿರ್ದೆಶನ: ಶ್ರೀ ರಂಜಿತ್ ಶೆಟ್ಟಿ ಕುಕ್ಕುಡೆ) ಮತ್ತು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ಕಾಕ್ ರವರ ಎದೆಯ ಹಣತೆ (ನಿರ್ದೇಶನ: ಶ್ರೀ ಗಣೇಶ್ ಎಂ.ಹೆಗ್ಗೋಡು) ನಾಟಕ ಪ್ರದರ್ಶನ ನಡೆಯಲಿದ್ದು ಪ್ರವೇಶ ಉಚಿತ.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಗೋಪಾಲಕೃಷ್ಣ ಶೆಟ್ಟಿ, ಕರುಣಾಕರ ಶೆಟ್ಟಿ, ನಾಗೇಶ್ ಶೆಟ್ಟಿ ಬಜಾಲ್, ರಂಜನ್ ಬೋಳೂರು, ಪ್ರಸಾದ್ ಶೆಟ್ಟಿ, ಉಪಸ್ಥಿತರಿದ್ದರು.

