ಮಂಗಳೂರಿನಲ್ಲಿ ನೂರಾರು ವಿದ್ಯಾರ್ಥಿ,ಉದ್ಯೋಗಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ತಂಡವನ್ನು ಪೊಲೀಸ್ ಬಂಧಿಸಿದ್ದಾರೆ.ಪೋಷಕರ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಮಂಗಳೂರು ಸೆನ್ ಕ್ರೈಮ್ ಠಾಣೆ ಪೊಲೀಸರು ಡ್ರಗ್ಸ್ ಜಾಲವೊಂದನ್ನು ಬಯಲಿಗಳೆದಿದ್ದಾರೆ.ಆಡು ಮರೋಳಿ ನಿವಾಸಿ ತುಷಾರ್ (21),ಜಲ್ಲಿಗುಡ್ಡೆಯ ಸಾಗರ್ ಕರ್ಕೇರ (19)ನಾಗೋರಿಯ ಧನ್ವಿ ಶೆಟ್ಟಿ (20),ಅಳಪೆ ಕಂಡೆಟ್ಟು ನಿವಾಸಿ ವಿಘ್ನೇಶ್ ಕಾಮತ್( 24) ಹಾಗೂ ಶಕ್ತಿನಗರದ ವಿಕಾಸ್ ಥಾಪ ಪುಚ್ಚಿ (23),ಬಂಧಿತರು ಎಂದು ಪೋಲಿಸರು ತಿಳಿಸಿದ್ದಾರೆ.

ಮಂಗಳೂರಿನ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಂದ 5.20 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ
ಆರೋಪಿಗಳು ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಿ ಪ್ರತಿ ಪ್ಯಾಕೆಟಿಗೆ 1000 ರೂ.ನಂತೆ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಅಲ್ಲದೆ ಆರೋಪಿಗಳಿಗೆ ಗಾಂಜಾ ಎಲ್ಲಿಂದ ಬರುತ್ತಿದೆ ಯಾರು ಪೂರೈಸುತ್ತಿದ್ದಾರೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಕಮೀಷನ್ ತಿಳಿಸಿದರು.
ಎರಡು ದಿನಗಳ ಹಿಂದೆ ಇಬ್ಬರು ಪೋಷಕರು ಬಂದು ತಮ್ಮ ಮಕ್ಕಳು ಡ್ರಗ್ಸ್ ಅಡಿಕ್ಟ್ ಆಗಿರುವ ಬಗ್ಗೆ ದೂರು ನೀಡಿದ್ದರು. ದೂರಿನ ಬಗ್ಗೆ ಕೂಲಂಕಷ ತನಿಖೆಗೆ ತಂಡ ರಚಿಸಿದ್ದೆವು. ಅದರಂತೆ, ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೂರೈಕೆ ಜಾಲದ ಐವರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನು ಜೈಲಿಗಟ್ಟಲಾಗಿದೆ.ಒಬ್ಬರು ಪೋಷಕರು ಬಂದು ದೂರು ಕೊಟ್ಟಿದ್ದರಿಂದ 200 ಜನರಿಗೆ ಡ್ರಗ್ಸ್ ಪೂರೈಕೆಯಾಗುತ್ತಿದ್ದುದನ್ನು ತಡೆಯವುದು ಸಾಧ್ಯವಾಗಿದೆ. ಅದೇ ರೀತಿ ಸಾರ್ವಜನಿಕರು ಬಂದು ದೂರು ಕೊಟ್ರೆ ಇಡೀ ಡ್ರಗ್ಸ್ ಜಾಲವನ್ನೇ ಜಿಲ್ಲೆಯಿಂದ ಮುಕ್ತಗೊಳಿಸಬಹುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

