ಟೊರಾಂಟೋ :ಕೆನಡಾದ ಸರ್ರೆಯಲ್ಲಿ ಹೊಸದಾಗಿ ತೆರೆಯಲಾದ ಕಪಿಲ್ ಶರ್ಮ ಮತ್ತು ಅವರ ಪತ್ನಿ ಗಿನ್ನಿ ಚತ್ರತ್ ಒಡೆತನದ ಕೆಫೆಯ ಮೇಲೆ ಗುಂಡಿನ ದಾಳಿ ನಡೆದಿದೆ.

ಜನಪ್ರಿಯ ಭಾರತೀಯ ಹಾಸ್ಯನಟ ಕಪಿಲ್ ಶರ್ಮಾ ಹೊಸದಾಗಿ ಆರಂಭಿಸಿದ “ಕ್ಯಾಪ್ಸ್ ಕೆಫೆ “ಮೇಲೆ ಬುಧವಾರ ತಡರಾತ್ರಿ ಗುಂಡಿನ ದಾಳಿ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ಕೆಫೆ ಇದ್ದ ಕಟ್ಟಡದ ಮೇಲೆ ಗುಂಡು ಹಾರಿಸಿ ನಂತರ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಘಟನೆಯಿಂದ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.ನಿಷೇಧಿತ ಉಗ್ರಗಾಮಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ವಾಂಟೆಡ್ ಖಲಿಸ್ತಾನಿ ಭಯೋತ್ಪಾದಕ ಹರ್ಜೀತ್ ಸಿಂಗ್ ಲಡ್ಡಿ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಲಡ್ಡಿ ಪ್ರಸ್ತುತ ಭಾರತದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ.

ಈ ದಾಳಿಯು ಕೆನಡಾದಲ್ಲಿರುವ ಭಾರತೀಯ ವಲಸಿಗರಲ್ಲಿ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ ಮತ್ತು ವಿದೇಶಗಳಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ಗುಂಪುಗಳ ಪ್ರಭಾವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರ್ರೆಯ ಸ್ಥಳೀಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಫೆಡರಲ್ ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಘಟನೆಯ ಬಗ್ಗೆ ಕಪಿಲ್ ಶರ್ಮಾ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.


