ಬೆಂಗಳೂರು : ಕನ್ನಡದ ಖ್ಯಾತ ಹಿರಿಯ ನಟಿ, ಬಿ. ಸರೋಜಾದೇವಿ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರೋಜಾದೇವಿ ಅವರು ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಆರೂವರೆ ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸರೋಜಾದೇವಿಯವರು 2019ರಲ್ಲಿ ತೆರೆಕಂಡ ಪುನೀತ್ ರಾಜ್ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರ ಕೊನೆಯ ಚಿತ್ರವಾಗಿತ್ತು.ಬಹುಭಾಷಾ ನಟಿಯಾಗಿದ್ದ ಅವರು ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

7 ಜನವರಿ 1938 ರಲ್ಲಿ ಜನಿಸಿದ ಅವರು ತಮ್ಮ17 ನೇ ವಯಸ್ಸಿಗೆ 1955ರಲ್ಲಿ ತೆರೆಗೆ ಬಂದ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಸರೋಜಾ ದೇವಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು.ನಂತರ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಜರ್ಮನಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿದ್ದ ಶ್ರೀಹರ್ಷ ಅವರೊಂದಿಗೆ 1967ರ ಮಾರ್ಚ್ 1 ರಂದು ಮದುವೆಯಾದರು.ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯ ನಂತರ ಪತಿ ಶ್ರೀಹರ್ಷ ಅವರ ಸಹಕಾರದೊಂದಿಗೆ ನಟನೆಯನ್ನೂ ಮುಂದುವರೆಸಿದರು 1986ರಲ್ಲಿ ಹೃದಯಾಘಾತದಿಂದ ಶ್ರೀಹರ್ಷ ಅವರು ನಿಧನರಾದರು.

ಮೇರು ನಟರಾದ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ದಿಲೀಪ್ ಕುಮಾರ್ ,ಶಿವಾಜಿಗಣೇಶನ್, ಎಂಜಿಆರ್, ಎನ್.ಟಿ ರಾಮರಾವ್, ಮೊದಲಾದ ಖ್ಯಾತನಾಮರೊಂದಿಗೆ ಅವರು ಅಭಿನಯಿಸಿದ್ದಾರೆ.ಅವರಿಗೆ ಭಾರತ ಸರಕಾರ ವತಿಯಿಂದ 1969 ರಲ್ಲಿ ಪದ್ಮಶ್ರೀ ಮತ್ತು 1992 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಲಾಗಿತ್ತು.

ಕೊಡಿಗೆಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆನ್ನು ನಡೆಸಲು ಕುಟುಂಬವರು ವರ್ಗ ಸಿದ್ದತೆ ನಡೆಸುತ್ತಿದ್ದಾರೆ.ಪತಿ ಹರ್ಷ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮಲ್ಲೆಶ್ವರಂನಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ.





