2028 ರಲ್ಲಿ ಲಾಸ್ ಏಂಜಲೀಸ್ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ವಿಶ್ವ ಕ್ರೀಡಾರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಡಲಿದೆ,ಇದು 128 ವರ್ಷಗಳ ನಂತರ ಕ್ರಿಕೆಟ್ ಒಲಿಂಪಿಕ್ ಗೆ ಮರಳಲಿದೆ.ಕ್ರಿಕೆಟ್ ಜೊತೆಗೆ ಬೇಸ್ಬಾಲ್-ಸಾಫ್ಟ್ಬಾಲ್, ಫ್ಲ್ಯಾಗ್ ಫುಟ್ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವ್ಯಾಷ್ 2028 ರ ಒಲಿಂಪಿಕ್ಸ್ನಲ್ಲಿ ಸೇರಿಸಲಾಗುವ ಇತರ ಕ್ರೀಡೆಗಳಾಗಿವೆ.

ಒಲಿಂಪಿಕ್ ನಲ್ಲಿ ಕ್ರಿಕೆಟ್ ನ್ನು ಟಿ 20 ಸ್ವರೂಪದಲ್ಲಿ ಸ್ಪರ್ಧಿಸಲಾಗುವುದು.ಇದರಲ್ಲಿ ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ.ಒಲಿಂಪಿಕ್ ನಲ್ಲಿ ಕ್ರಿಕೆಟ್ ಸ್ಪರ್ಧೆಗಳು ಜುಲೈ 12 ರಿಂದ 29ರ ವರೆಗೆ ನಡೆಯಲಿದೆ.ಎಲ್ಲಾ ಪಂದ್ಯಗಳು ಲಾಸ್ಏಂಜಲೀಸ್ ನಿಂದ 50 ಕಿ.ಮೀ ದೂರದಲ್ಲಿರುವ ಪೊಮೊನಾದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರತಿದಿನ ಎರಡು ಪಂದ್ಯಗಳು ನಡೆಯಲಿದ್ದು ಪ್ರಥಮ ಪಂದ್ಯ ರಾತ್ರಿ 9:30 ಮತ್ತು ಬೆಳಗ್ಗೆ 7 ಗಂಟೆಗೆ ಎರಡನೇ ಮ್ಯಾಚ್ ನಡೆಯಲಿದೆ.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಚ್ ಈ ಹಿಂದೆ ಈ ಆಟಗಳನ್ನು ಒಲಿಂಪಿಕ್ಸ್ನಲ್ಲಿ ಸೇರಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು ಮತ್ತು ಐಒಸಿ ಸದಸ್ಯೆ ಮತ್ತು ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರು 141 ನೇ ಐಒಸಿ ಒಲಿಂಪಿಕ್ ಅಧಿವೇಶನದಲ್ಲಿ ಕ್ರಿಕೆಟ್ ಅನ್ನು ಸೇರಿಸಿರುವುದನ್ನು ನೋಡಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.

128 ವರ್ಷಗಳ ನಂತರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಮರಳುತ್ತಿದೆ. ಕ್ರಿಕೆಟ್ ಅನ್ನು ಕೊನೆಯದಾಗಿ 1900 ರಲ್ಲಿ ಪ್ಯಾರಿಸ್ ನಡೆದ ಒಲಿಂಪಿಕ್ಸ್ನಲ್ಲಿ ಆಡಲಾಯಿತು. ಆಗ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ತಂಡಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಅಂದು ಎರಡೂ ತಂಡಗಳ ಮಧ್ಯೆ ನಡೆದ ಟೆಸ್ಟ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವು ಫ್ರಾನ್ಸ್ ನ್ನು ಕೇವಲ ಎರಡು ದಿನದಲ್ಲಿ ಸೋಲಿಸಿ ಚಿನ್ನದ ಪದಕ ಗೆದ್ದಿತು.

ಲ್ಯಾಕ್ರೋಸ್ ಅನ್ನು 1904 ರ ಸೇಂಟ್ ಲೂಯಿಸ್ ಒಲಿಂಪಿಕ್ಸ್ ಮತ್ತು 1908 ರ ಲಂಡನ್ ಒಲಿಂಪಿಕ್ಸ್ನಲ್ಲಿ ಸೇರಿಸಲಾಯಿತು.ಈ ಕ್ರೀಡಾಕೂಟಗಳ ಸೇರ್ಪಡೆಯೊಂದಿಗೆ,ಒಲಿಂಪಿಕ್ಸ್ನಲ್ಲಿ ಒಟ್ಟು ಕ್ರೀಡಾಕೂಟಗಳ ಸಂಖ್ಯೆ 33 ಕ್ಕೆ ಏರಿದೆ.


