ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 7 ರಂದು 2025-26ನೇ ಸಾಲಿನ ತಮ್ಮ ಬಜೆಟ್ ಭಾಷಣದಲ್ಲಿ ಮಲ್ಟಿಪ್ಲೆಕ್ಸ್ಗಳೂ ಸೇರಿದಂತೆ ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಟಿಕೆಟ್ ಬೆಲೆಯನ್ನು 200 ರೂ.ಗೆ ಮಿತಿಗೊಳಿಸುವ ಯೋಜನೆಯನ್ನು ಘೋಷಿಸಿದ್ದರು. ಇದೀಗ ಘೋಷಣೆಗೆ ಅನುಗುಣವಾಗಿ ಕರ್ನಾಟಕ ಸರ್ಕಾರ ಮಂಗಳವಾರ ಪ್ರಾದೇಶಿಕ ಭಾಷಾ ಚಲನಚಿತ್ರಗಳ ಸಿನಿಮಾ ಟಿಕೆಟ್ಗಳ ಬೆಲೆಯನ್ನು 200 ರೂ.ಗೆ ಮಿತಿಗೊಳಿಸಿ ಆದೇಶ ಹೊರಡಿಸಿದೆ.

ಕರ್ನಾಟಕ ಸಿನಿಮಾಸ್ (ನಿಯಂತ್ರಣ) ನಿಯಮಗಳು, 2014 ರ ತಿದ್ದುಪಡಿಯ ಮೂಲಕ ಬೆಲೆಗಳ ಮಿತಿಯನ್ನು ಜಾರಿಗೆ ತರಲಾಗಿದ್ದು, ಇದರಲ್ಲಿ ನಿಯಮ 55 ಅನ್ನು ಹೊಸ ಉಪ-ನಿಯಮವನ್ನು ಸೇರಿಸಲು ತಿದ್ದುಪಡಿ ಮಾಡಲಾಗಿದೆ ಉಪ-ನಿಯಮ ಸಂಖ್ಯೆ ಆರರಲ್ಲಿ ಮಲ್ಟಿಪ್ಲೆಕ್ಸ್ಗಳು ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷಾ ಚಲನಚಿತ್ರಗಳಿಗೆ ಪ್ರತಿ ಪ್ರದರ್ಶನದ ಟಿಕೆಟ್ನ ಬೆಲೆ ಮನರಂಜನಾ ತೆರಿಗೆಯನ್ನು ಒಳಗೊಂಡಂತೆ 200 ರೂ.ಗಳನ್ನು ಮೀರಬಾರದು ಎಂದು ಹೇಳಲಾಗಿದೆ.

ಮಲ್ಟಿಪ್ಲೆಕ್ಸ್ಗಳ ವಿರೋಧದ ಹೊರತಾಗಿಯೂ, ಕನ್ನಡ ಚಿತ್ರಗಳಿಗೆ ಹೆಚ್ಚಿನ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವ ಪ್ರಯತ್ನವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘವು ಈ ಪ್ರಸ್ತಾಪವನ್ನು ಬೆಂಬಲಿಸಿದವು.

ಜುಲೈ 15, ಮಂಗಳವಾರ ಬಿಡುಗಡೆಯಾದ ಸರ್ಕಾರಿ ಅಧಿಸೂಚನೆಯ ಪ್ರಕಾರ, ಬೆಲೆಗಳ ಮಿತಿಯ ಕುರಿತಾದ ಕರಡನ್ನು ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

2017 ರಲ್ಲಿ ಮುಖ್ಯಮಂತ್ರಿಯಾಗಿ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮಲ್ಟಿಪ್ಲೆಕ್ಸ್ಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಚಲನಚಿತ್ರ ಟಿಕೆಟ್ಗಳ ಬೆಲೆ 200 ರೂ ಮಿತಿಯನ್ನು ಘೋಷಿಸಿದ್ದರು.ಆದರೆ ಈ ಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಅಡೆತಡೆಗಳು ಎದುರಾದವು. ಮಲ್ಟಿಪ್ಲೆಕ್ಸ್ ಮಾಲೀಕರು ಆದಾಯ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ನಿರ್ಧಾರವನ್ನು ಪ್ರಶ್ನಿಸಿದರು.ಕೊನೆಗೆ ಮಿತಿಯನ್ನು ತೆಗೆದುಹಾಕಲಾಯಿತು, ಚಿತ್ರಮಂದಿರಗಳು ತಮ್ಮದೇ ಆದ ಬೆಲೆ ರಚನೆಗಳನ್ನು ಹೊಂದಿದ್ದವು.
ಇದೀಗ ಗೃಹ ಇಲಾಖೆಯ ಕಾರಾಗೃಹ ಮತ್ತು ಸಿನಿಮಾ ವಿಭಾಗದ ಸರ್ಕಾರದ ಅಧೀನ ಕಾರ್ಯದರ್ಶಿ ಜುಲೈ 15 ರಂದು ಹೊರಡಿಸಿದ ಆದೇಶಕ್ಕೆ ರಾಜ್ಯಪಾಲರ ಪರವಾಗಿ ಸಹಿ ಹಾಕಿದ್ದಾರೆ.

