ಏಪ್ರಿಲ್ನಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಎಎಸ್ಪಿ ನಾರಾಯಣ ಭರಮನಿ ಅವರನ್ನು ವೇದಿಕೆಗೆ ಕರೆಸಿ ಕಿಕ್ಕಿರಿದ ಸಾರ್ವಜನಿಕ ಸಭೆಯಲ್ಲಿ ತಾಳ್ಮೆ ಕಳೆದುಕೊಂಡು ಎಎಸ್ಪಿ ನಾರಾಯಣ ಭರಮನಿ ಅವರ ಮೇಲೆ ಕೈ ಮಾಡಲು ಹೋಗಿದ್ದರು.ಪೊಲೀಸ್ ಇಲಾಖೆಯಲ್ಲಿ ದೀರ್ಘ ಕಾಲದ ಕೆಲಸ ಮಾಡಿದ ನಂತರ ತನಗೆ ಆಗಿರುವ ಈ ಅವಮಾನನ್ನು ಸಹಿಸಲಾಗದೆ ಮನನೊಂದು ಇತ್ತೀಚೆಗಷ್ಟೇ ಎಎಸ್ಪಿ ಹುದ್ದೆಗೆ ಸ್ವಯಂ ಪ್ರೇರಿತ ರಾಜೀನಾಮೆ ಸಲ್ಲಿಸಿದ್ದರು.

ಈ ಘಟನೆಯಿಂದ ರಾಜ್ಯ ರಾಜಕಾರಣದಲ್ಲಿ ಭರಮನಿ ರಾಜೀನಾಮೆ ವಿಚಾರ ಸಂಚಲನ ಸೃಷ್ಟಿಸಿತ್ತು. ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ನಂತರ ನಾರಾಯಣ ಭರಮನಿ ಅವರಿಗೆ ಸ್ವತಃ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಫೋನ್ ಮಾಡಿ ಮನವೊಲಿಸಿದ್ದರು.

ಈಗ ಡಿಸಿಪಿ ಹುದ್ದೆ ನೀಡುವ ಮೂಲಕ ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ. ಪೊಲೀಸ್ ಇಲಾಖೆಯಲ್ಲಿ 31ವರ್ಷ ಸೇವೆ ಸಲ್ಲಿಸಿ ಇನ್ನು ನಾಲ್ಕು ವರ್ಷಗಳ ಸೇವೆ ಸಲ್ಲಿಸಿದ ನಂತರ ನಿವೃತ್ತಿ ಹೊಂದಲಿರುವ ನಾರಾಯಣ ಭರಮನಿಯವರಿಗೆ
ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ನಾರಾಯಣ ಭರಮನಿ ಅವರಿಗೆ ಸರ್ಕಾರ ಬಡ್ತಿ ನೀಡಿದೆ. ಬೆಳಗಾವಿ ಡಿಸಿಪಿ ಆಗಿ ನೇಮಕ ಮಾಡಿ ಸರ್ಕಾರದ ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಎಂ. ಧನಂಜಯ್ ಆದೇಶ ಹೊರಡಿಸಿದ್ದಾರೆ.ಇದೀಗ ಎಎಸ್ಪಿ ಹುದ್ದೆಯಿಂದ ಡಿಸಿಪಿ ಹುದ್ದೆಗೆ ಬಡ್ತಿ ನೀಡುವ ಮೂಲಕ ಭರಮನಿ ಅವರನ್ನು ಸಮಾಧಾನಪಡಿಸಲಾಗಿದೆ.

