ಕುಂದಾಪುರ: ಕುಂದಾಪುರ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ವಿಶೇಷಚೇತನರ ಪ್ರಮಾಣಪತ್ರ ಮಾಡಿಸಲು ಕುಂದಾಪುರ ಮತ್ತು ಬೈಂದೂರಿನ ಬೇರೆ ಬೇರೆ ಕಡೆಗಳಿಂದ ಬಂದಿದ್ದ ವಿಶೇಷ ಚೇತನರು ಪ್ರಮುಖ ಶಸ್ತ್ರಚಿಕಿತ್ಸಕ ವೈದ್ಯರು ಲಭ್ಯವಾಗದ ಕಾರಣ ಪ್ರಮಾಣಪತ್ರ ಸಿಗದೆ ನಿರಾಶರಾಗಿ ವಾಪಸ್ ಆದ ಘಟನೆ ಇತ್ತೀಚಿಗೆ ನಡೆದಿದ್ದು ಕೂಡಲೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ವೈದ್ಯರನ್ನು ನೇಮಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಪತ್ರಮುಖೇನ ಒತ್ತಾಯಿಸಿದ್ದಾರೆ.
ಪ್ರತೀ ಗ್ರಾಮ ಪಂಚಾಯತ್ಗಳಲ್ಲಿ ವಿಆರ್ ಡಬ್ಲ್ಯು, ತಾಲೂಕುಗಳಲ್ಲಿ ಎಂಆರ್ಡಬ್ಲ್ಯುಗಳು ಇರುತ್ತಾರೆ, ಸ್ವತ: ವಿಶೇಷ ಚೇತನರಾಗಿರುವ ಅವರು ಮನೆಗಳಿಗೆ ಭೇಟಿ ನೀಡಿ ವಿಶೇಷ ಚೇತನರನ್ನು ಗುರುತಿಸಿ ಸೌಲಭ್ಯಗಳು ದೊರೆಯುವಂತೆ ಮಾಡುತ್ತಾರೆ. ಯುಡಿಐಡಿ ಕಾರ್ಡ್ ಮಾಡಿಸಲೆಂದು ಆಸ್ಪತ್ರೆಗೆ ತಪಾಸಣೆಗೆ ನಿರ್ದಿಷ್ಟ ದಿನಗಳಂದು ಕಳಿಸುತ್ತಾರೆ. ನಿರ್ದಿಷ್ಟ ದಿನಗಳಂದು ವಿಶೇಷಚೇತನರನ್ನು ಅವರ ಪೋಷಕರು, ಪಾಲಕರು ಕರೆದುಕೊಂಡು ಬರುತ್ತಾರೆ. ಅದಕ್ಕಾಗಿ ಮನೆಯವರು ತಮ್ಮ ಉದ್ಯೋಗಗಳಿಗೆ ರಜೆ ಹಾಕಿ ಬಂದಿರುತ್ತಾರೆ. ಆದರೆ ಶಸ್ತ್ರಚಿಕಿತ್ಸಕ ವೈದ್ಯರು ಲಭ್ಯರಿಲ್ಲದ ಕಾರಣ ಇತರ ವೈದ್ಯರು ಪ್ರಮಾಣಪತ್ರ ನೀಡುವಂತಿಲ್ಲ. ಹೀಗಾಗಿ ಗ್ರಾಮಸ್ಥರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಕುಂದಾಪುರ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ದಿನಾಂಕ 11/07/2025ರಂದು ಇ.ಎನ್.ಟಿ. ಮಾನಸಿಕ ಚಿಕಿತ್ಸೆ, ಮೂಳೆ ಚಿಕಿತ್ಸೆ, ಮಕ್ಕಳ ವೈದ್ಯರು ಇರಲಿಲ್ಲ. ಒಬ್ಬರಿಗೆ ಮೀಟಿಂಗ್, ಒಬ್ಬರಿಗೆ ಆಪರೇಷನ್ ಇತ್ತು. ಒಬ್ಬರು ವರ್ಗವಾಗಿದ್ದಾರೆ, ಒಬ್ಬರಿಗೆ ಅನಾರೋಗ್ಯ ಎಂಬ ಕಾರಣಗಳಿಂದಾಗಿ ಹೆಚ್ಚಿನ ಶಸ್ತ್ರಚಿಕಿತ್ಸಕ ವೈದ್ಯರು ಕರ್ತವ್ಯದಲ್ಲಿ ಇರಲಿಲ್ಲ. ಯುಡಿಐಡಿ ಗುರುತಿನ ಚೀಟಿ ಆಧಾರ್, ಪಡಿತರ ಚೀಟಿಗೆ ಜೋಡಿಕೆಯಾಗಿದ್ದು ಮಾಸಾಶನ, ಉಪಕರಣಗಳು, ಚಿಕಿತ್ಸೆಯಲ್ಲಿ ರಿಯಾಯತಿ, ಕೃತಕ ಕಾಲು, ಗಾಲಿಕುರ್ಚಿ, ಕನ್ನಡಕ, ಶ್ರವಣ ಸಾಧನ, ಶಸ್ತ್ರಚಿಕಿತ್ಸೆ ಇತ್ಯಾದಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಸವಲತ್ತು ಬೇಕಾದರೂ ಇದೇ ಯುಡಿಐಡಿ ಸಂಖ್ಯೆ ಹಾಗೂ ಗುರುತಿನ ಚೀಟಿಯ ಅವಶ್ಯವಿದೆ.
ಈ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ವೈದ್ಯರ ಕೊರತೆಯನ್ನು ನೀಗಿಸಿ ವಿಕಲಚೇತನರ ಪ್ರಮಾಣಪತ್ರಗಳನ್ನು ಕ್ಲಪ್ತಸಮಯದಲ್ಲಿ ಒದಗಿಸುವ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸುವಂತೆ ಪತ್ರದಲ್ಲಿ ಮನವಿಯನ್ನು ಮಾಡಿದ್ದಾರೆ.
ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ವಿಶೇಷ ಚೇತನರ ಸಮಸ್ಯೆ ಪರಿಹಾರಕ್ಕೆ ಶಾಸಕ ಮಂಜುನಾಥ ಭಂಡಾರಿ ಒತ್ತಾಯ!
Related Posts
© 2026 Mangalore Mitra. Designed by Blueline Computers.

