ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಮಹಿಳೆಯರು ನಾಪತ್ತೆ ಹಾಗೂ ಶವವನ್ನು ಹೂತಿಡಲಾಗಿದೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿದೆ.

ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಶಕಗಳಲ್ಲಿ ನಡೆದ ಅಸಹಜ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಭಾರೀ ಒತ್ತಡ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಹ ಸಚಿವ ಡಾ.ಪರಮೇಶ್ವರ್ ಪ್ರಕರಣದ ಬಗ್ಗೆ ಚರ್ಚಿಸಿ ಸಮಗ್ರ ತನಿಖೆ ನಡೆಸಲು ಐಪಿಎಸ್ ಅಧಿಕಾರಿ ಡಾ.ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿದೆ.ಎಸ್ಐಟಿ ಸದಸ್ಯರಾದ ಐಪಿಎಸ್ ಅಧಿಕಾರಿಗಳಾದ ಅನುಚೇತ್, ಸೌಮ್ಯಲತಾ, ಜಿತೇಂದ್ರಕುಮಾರ್ ಈ ತಂಡದಲ್ಲಿ ಇದ್ದಾರೆ.

ಈ ವಿಶೇಷ ತನಿಖಾ ತಂಡವು ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರು, ಹೊರ ರಾಜ್ಯದವರು, ಅತ್ಯಾಚಾರ,ಕೊಲೆ ,ಅಸ್ವಾಭಾವಿಕ ಸಾವಿನ ಬಗ್ಗೆ ತನಿಖೆ ನಡೆಸಲಿದೆ
ನಟಿ ರಮ್ಯಾ ಟ್ವೀಟ್

ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ವದಂತಿ ಕೇಸ್ಗಳಿಗೆ ಸಂಬಂಧಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನಟಿ ರಮ್ಯಾ, ‘ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿ ಮತ್ತು ಮಹಿಳೆಯರ ನಾಪತ್ತೆ ಘಟನೆಗಳ ಬಗ್ಗೆ ಕೇಳಿ ನನಗೆ ತುಂಬಾ ಆಘಾತವಾಗಿದೆ.ಧರ್ಮಸ್ಥಳ ಎಂಬುದು ಅನೇಕ ಮಂದಿಗೆ ಆರಾಧನೆಯ ಸ್ಥಳವಾಗಿದೆ. ಕರ್ನಾಟಕದ ಜನರು ಈ ಪೂಜ್ಯ ಸ್ಥಳವನ್ನು ಹೆಚ್ಚು ಗೌರವಿಸುತ್ತಾರೆ. ಈ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆಯಾಗಬೇಕು ಎಂದು ನಾನು ಆಶಿಸುತ್ತೇನೆ. ನಾವು ಸತ್ಯವನ್ನು ತಿಳಿದುಕೊಳ್ಳಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

