ಗದಗ : ಮದುವೆ ನೆಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಿದ್ದಾರೆ ಎಂಬ ಭಾರೀ ಸದ್ದು ಮಾಡುತ್ತಿರುವ ಲವ್ ಜಿಹಾದ್ ಪ್ರಕರಣವು ಇದೀಗ ತಿರುವು ಪಡೆದುಕೊಂಡಿದ್ದು ಇದೀಗ ಪತ್ನಿಯೇ ಪತಿ ವಿಶಾಲ್ ಕುಮಾರ್ ಮೇಲೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಜಿಲ್ಲೆಯ ಬೆಟಗೇರಿಯ ಸೆಟ್ಮೆಂಟ್ ಪ್ರದೇಶದ ಯುವಕ ವಿಶಾಲ್ ಕುಮಾರ್ ಹಾಗೂ ಕುರಟ್ಟಿಪೇಟೆಯ ಮುಸ್ಲಿಂ ಧರ್ಮದ ಯುವತಿ ತಹಸೀನ್ ಕಳೆದ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ-ಪ್ರೇಮದ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದ ಈ ಜೋಡಿ 2024 ರ ನವೆಂಬರ್ 26 ನೇ ತಾರೀಕು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.ನಂತರ ರಿಜಿಸ್ಟರ್ ವಿಷಯ ಯುವತಿಯ ಮನೆಯವರಿಗೆ ಗೊತ್ತಾಗಿದೆ. ಆ ಬಳಿಕ ಮುಸ್ಲಿಂ ಸಂಪ್ರದಾಯದಂತೆಯೇ ಮದುವೆಗೆ ಮಾಡಿಕೊಳ್ಳಲು ವಿಶಾಲ್ ಬಳಿ ಯುವತಿಯ ಕುಟುಂಬ ದುಂಬಾಲು ಬಿದ್ದಿದ್ದರು.

ಬಳಿಕ ತಹಸೀನ್, ಆಕೆಯ ತಾಯಿ ಬೇಗಂ ಬಾನು, ತಹಸೀನ್ ಸೋದರ ಮಾವ ಇಬ್ರಾಹಿಂ ಖಾನ್ ದಾವಲ್ ಸಾಬ್ ಮುಸ್ಲಿಂ ನಿಖಾಗೆ ಒತ್ತಾಯ ಮಾಡಿದ್ರು. ಪ್ರೀತಿಸಿದ್ದ ಯುವತಿಗಾಗಿ ಮದುವೆಗೆ ಒಪ್ಪಿಕೊಂಡಿದ್ದ ವಿಶಾಲ್ ಕುಮಾರ್, 2025ರ ಏಪ್ರಿಲ್ 25ರಂದು ಮುಸ್ಲಿಂ ಸಂಪ್ರದಾಯದಂತೆ ಮುಳಗುಂದ ನಾಕಾ ಬಳಿ ಇರುವ ಉಮರಬೀನ್ ಕತ್ತಾಬ್ ಮಸೀದಿಯಲ್ಲಿ ನಿಖಾ ನಡೆದಿತ್ತು. ಅಲ್ಲಿ ವಿಶಾಲ್ ಗೆ ಅರಿವಿಲ್ಲದೇ ನಿಖಾ ನಾಮದಲ್ಲಿ ಆತನ ಹೆಸರನ್ನು ವಿರಾಜ್ ಸಾಬ್ ಎಂದು ದಾಲಿಸಲಾಗಿತ್ತು.ನಿಖಾ ದಫ್ತರ್ ನಲ್ಲಿ ಅಂದ್ರೆ ಮದುವೆಯ ರಿಜಿಸ್ಟರ್ ನಲ್ಲಿ ಬದಲಾದ ಹೆಸರನ್ನು ಉರ್ದುವಿನಲ್ಲಿ ಬರೆಯಲಾಗಿದೆ. ವಿಶಾಲ್ ತನ್ನನ್ನು ಮದುವೆ ನೆಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದ.

ಇದೀಗ ಪ್ರಕರಣವು ತಿರುವು ಪಡೆದಿದ್ದು ಪತಿ ವಿಶಾಲ್ ವಿರುದ್ಧ ಈಗ ಪತ್ನಿ ತಹಸೀನ್ ಪೋಸ್ಕೋ ಪ್ರಕರಣ ದಾಖಲಿಸಿದ್ದಾಳೆ.
ಯುವತಿಯು ತನಗೆ 17 ವರ್ಷದವಳಾಗಿದ್ದಾಗ ನನ್ನ ಜತೆ ಬಲವಂತಾಗಿ ದೈಹಿಕ ಸಂಪರ್ಕ ಮಾಡಿ ವಿಶಾಲ್ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ ಎಂದು ಯುವತಿ ಗದಗ ಮಹಿಳಾ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾಳೆ ಎಂದು ಗದಗ ಎಸ್ಪಿ ತಿಳಿಸಿದ್ದಾರೆ. ಪ್ರಕರಣ ಮತ್ತಷ್ಟು ಕಗ್ಗಂಟಾಗುತ್ತಿರುವುದರಿಂದ ಪೊಲೀಸರು ಎರಡೂ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ

