ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯು ತನ್ನ ರೌದ್ರಾವತಾರವನ್ನು ಮುಂದುವರಿಸಿದೆ. ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಶುಕ್ರವಾರವೂ ಐಎಂಡಿ ರೆಡ್ ಆಲರ್ಟ್ ಘೋಷಿಸಿದೆ.

ಮಂಗಳೂರು ತಾಲೂಕಿನ ಅಂಗನವಾಡಿಗಳಿಂದ ಹಿಡಿದು ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜುಲೈ 25ರಂದು ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಜೊತೆಗೆ ಭಾರೀ ಪ್ರಮಾಣದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ.
ಕರಾವಳಿ ತೀರದಲ್ಲಿ ಎತ್ತರದ ಅಲೆಗಳು ಏಳುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ

