ಬೆಂಗಳೂರು : ಜೆ.ಪಿ. ತುಮಿನಾಡ್ ನಿರ್ದೇಶನದ ಹಾಸ್ಯ ಮತ್ತು ಹಾರರ್ನ ಪರಿಪೂರ್ಣ ಮಿಶ್ರಣದ ಕನ್ನಡ ಚಲನಚಿತ್ರ ‘ಸು ಫ್ರಮ್ ಸೋ’ ಸೂಪರ್ ಹಿಟ್ ಆಗಿದ್ದು ಜನರು ಚಿತ್ರವನ್ನು ಥಿಯೇಟರ್ ಗೆ ಬಂದು ನೋಡಿ ಖುಷಿ ಪಡುತ್ತಿದ್ದಾರೆ.

ಕರಾವಳಿ ಭಾಗದ ಕತೆಯನ್ನು ಒಳಗೊಂಡ ಈ ಸಿನೆಮಾ ಕೇರಳಕ್ಕೂ ಒಪ್ಪುವ ಕಾರಣದಿಂದ ಚಿತ್ರವನ್ನು ಮಲಯಾಳಂ ಭಾಷೆಗೆ ಡಬ್ ಮಾಡಿ ಕೇರಳದಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಮಲಯಾಳಂ ಭಾಷೆಯ ಟರ್ಬೋ ಚಿತ್ರದಲ್ಲಿ ಮಮ್ಮುಟ್ಟಿ ಜೊತೆ ರಗಡ್ ವಿಲನ್ ಪಾತ್ರದಲ್ಲಿ ನಟಿಸಿ ಕೇರಳದಾದ್ಯಂತ ಪರಿಚಿತರಾಗಿರುವ ರಾಜ್ ಬಿ.ಶೆಟ್ಟಿ ತಮ್ಮ ಲೈಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿ ಪ್ರಸ್ತುತ ಪಡಿಸುತ್ತಿದ್ದಾರೆ.

ಮಲಯಾಳಂ ನಟ ದುಲ್ಕರ್ ಸಲ್ಮಾನ್ ಒಡೆತನದ ವೇಫೇರರ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯವರು ಚಿತ್ರವನ್ನು ವೀಕ್ಷಿಸಿ ಚಿತ್ರವನ್ನು ಇಷ್ಟಪಟ್ಟಿದ್ದಾರೆ.ಆದ್ದರಿಂದ ಅವರು ಚಿತ್ರವನ್ನು ಮಲಯಾಳಂನಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಅಲ್ಲದೆ ಕನ್ನಡ ಭಾಷೆಯಲ್ಲಿ ಅಗಸ್ಟ್ 25 ರಂದು ಕರ್ನಾಟಕದಾದ್ಯಂತ ಚಲನಚಿತ್ರ ಬಿಡುಗಡೆಯಾಗಿದ್ದು ತೆರೆ ಕಂಡ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ಪುಲ್ ಪ್ರದರ್ಶನ ಕಾಣುತ್ತಿದೆ.ಒಂದು ವಾರದ ಅಂತರದಲ್ಲಿ ಮಲಯಾಳಂ ಭಾಷೆಯಲ್ಲಿ ಕೇರಳದಲ್ಲಿ ಬಿಡುಗಡೆಯಾಗಲಿದೆ.ಚಿತ್ರವನ್ನು ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ ಮತ್ತು ರಾಜ್ ಬಿ ಶೆಟ್ಟಿ ನಿರ್ಮಿಸಿದ್ದಾರೆ .

ಚಿತ್ರದಲ್ಲಿ ಶನೀಲ್ ಗೌತಮ್,ಜೆ.ಪಿ. ತುಮಿನಾಡ್, ದೀಪಕ್ ಪಾಣಾಜೆ, ಪ್ರಕಾಶ್ ಕೆ. ತುಮಿನಾಡು, ರಾಜ್.ಬಿ ಶೆಟ್ಟಿ, ಮೈಮ್ ರಾಮದಾಸ್ ,ಸಂಧ್ಯಾ ಅರೆಕೆರೆ ಮುಂತಾದವರು ಅಭಿನಯಿಸಿದ್ದಾರೆ.


