ಮಂಗಳೂರು : ಮಂಗಳೂರಿನ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ಗುರು ಪೂರ್ಣಿಮಾ ಆಚರಣೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ ಭಾಗವಹಿಸಿ ಮಠದ ಆವರಣದಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆಗೊಳಿಸಿದರು.

ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು ಅಮ್ಮ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರಿಂದ ಪ್ರತಿಷ್ಠಿತ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರವು ದೇವಸ್ಥಾನಗಳ ಪರಿಕಲ್ಪನೆಯಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ನಾಲ್ಕು ದಿಕ್ಕುಗಳಿಗೆ ಅಭಿಮುಖವಾಗಿ ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟ ವಿಗ್ರಹ ಅಮ್ಮನವರ ಸಂಕಲ್ಪದಿಂದ ಬಹಳ ಸುಂದರವಾಗಿ ಮೂಡಿಬಂದಿದೆ. ಇದು ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಅಮ್ಮನ ಅನುಗ್ರಹದಿಂದ ಇಲ್ಲಿ ನಡೆಯುತ್ತಿರುವ ಮಾನವೀಯ ಸೇವಾ ಉಪಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯರವರು ಅತಿಥಿಯಾಗಿ ಭಾಗವಹಿಸಿ ಆಶ್ರಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸಮಾಜಮುಖಿ ಸೇವಾಕಾರ್ಯದಲ್ಲಿ ಸಹಕಾರ ನೀಡುವ ಭರವಸೆ ನೀಡಿದರು.
ಸೇವಾಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಗೌರವಾರಪಣೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.
ಡಾ.ದೇವದಾಸ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಡಾ.ಜೀವರಾಜ್ ಸೊರಕೆ, ಡಾ.ವಸಂತ ಕುಮಾರ್ ಪೆರ್ಲ,ಮುರಳೀಧರ್ ಶೆಟ್ಟಿ, ಡಾ ಸನತ್ ಹೆಗ್ಡೆ, ಶ್ರುತಿ ಹೆಗ್ಡೆ, ಸಿ.ಎ.ರಾಮನಾಥ್ ,ಡಾ ಸುಚಿತ್ರಾ ರಾವ್, ಪ್ರೇಮರಾಜ್,ಪ್ರವೀಣ್ ಶಬರೀಶ್ ಮೊದಲಾದ ಪದಾಧಿಕಾರಿಗಳು ಭಾಗವಹಿಸಿದ್ದರು.

ಮಹಾಗಣಪತಿ ಹೋಮ,ಮಹಾ ಮೃತ್ಯುಂಜಯ ಹೋಮ,ಗುರುಹೋಮ, ಸರ್ವೈಶ್ವರ್ಯ ಸೌಭಾಗ್ಯ ಪೂಜೆ :
ಗುರು ಪೂರ್ಣಿಮಾ ಪ್ರಯುಕ್ತ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಪೂರ್ವಾಹ್ನ ಮಹಾ ಗಣಪತಿಹೋಮ,ಗುರು ಹೋಮ, ಮಹಾ ಮೃತ್ಯುಂಜಯ ಹೋಮ ಹಾಗೂ ಸರ್ವೈಶ್ವರ್ಯ ಸೌಭಾಗ್ಯ ಪೂಜೆ ನೆರವೇರಿಸಲಾಯಿತು.

ಗುರು ಪೂಜಾ ಸಮಾರೋಪ:
48 ದಿನಗಳ ಗುರು ಪೂಜಾ ಕಾರ್ಯಕ್ರಮದ ಸಮಾರೋಪವು ಶ್ರದ್ಧಾ ಭಕ್ತಿಗಳಿಂದ ನಡೆಯಿತು.
ಸ್ವಾಮಿನಿ ಮಂಗಳಾಮೃತ ಪ್ರಾಣರವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಮಾರ್ಗದರ್ಶನವಿತ್ತರು.ಅವರು ಆಶೀರ್ವಚನವಿತ್ತು
ಗುರುಪೂರ್ಣಿಮಾ ಪ್ರಯುಕ್ತ ಆಚರಣೆ ಮಾಡುವ ಗುರು ಪೂಜೆಯ ಮಹತ್ವವನ್ನು ತಿಳಿಸಿದರು.ಸದ್ಗುರುವಿನೊಂದಿಗೆ ಭಕ್ತರ ಬಾಂಧವ್ಯವನ್ನು ಸುಭದ್ರ ಗೊಳಿಸಲು ಗುರುಪೂಜೆ ಅತ್ಯುತ್ತಮ ಮಾರ್ಗ ಎಂದರು.

ಕಳೆದ ನಲ್ವತ್ತೆಂಟು ದಿನಗಳಿಂದ ಮನೆಯಲ್ಲಿಯೇ ಕುಳಿತು ಶ್ರದ್ಧೆಯಿಂದ ಗುರುಪೂಜೆಯನ್ನು ಇಲ್ಲಿ ನೀಡಲ್ಪಟ್ಟ ಮಾರ್ಗದರ್ಶನದಂತೆ ನಡೆಸುತ್ತಾ ಬಂದ ಭಕ್ತರು ತಮ್ಮ ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು.
ಗುರುಪೂಜೆಯಲ್ಲಿ ಭಾಗವಹಿಸಿದವರಿಗೆ ಅಮೃತಪುರಿಯ ವಿಶೇಷ ಪ್ರಸಾದ ವಿತರಣೆ, ಭಕ್ತರಿಂದ ಕ್ಷೀರಾಭಿಷೇಕ, ಗುರು ಪಾದುಕಾ ಪೂಜೆ ಹಾಗೂ ಸುಶ್ರಾವ್ಯ ಭಜನೆಗಳು ಭಕ್ತರನ್ನು ಸಂತೃಪ್ತಗೊಳಿಸಿತು.

ಆಗಮಿಸಿದ ಎಲ್ಲರಿಗೂ ಅನ್ನ ಪ್ರಸಾದ ವಿತರಣೆ ಮಾಡಲಾಯಿತು.ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಿದ ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕರಾವಳಿ ಕರ್ನಾಟಕದ ವಿವಿಧ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಹಾಗೂ ಸೇವಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

