ಬಟುಮಿ (ಜಾರ್ಜಿಯಾ): ಭಾರತೀಯ ಚೆಸ್ ಇತಿಹಾಸಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಗಿದೆ. 19 ವರ್ಷದ ದಿವ್ಯಾ ದೇಶಮುಖ್ ಮಹಿಳಾ ಚೆಸ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.ವಿಶ್ವದ ಅಗ್ರ ಮಹಿಳಾ ಚೆಸ್ ಆಟಗಾರ್ತಿಯರಲ್ಲಿ ಒಬ್ಬರಾದ ಕೊನೆರು ಹಂಪಿ ಅವರನ್ನು ಸೋಲಿಸುವ ಮೂಲಕ ಅವರು ಇತಿಹಾಸ ನಿರ್ಮಿಸಿದ್ದಾರೆ.

ಜಾರ್ಜಿಯಾದ ಬಟುಮಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ನಾಗ್ಪುರ ಮೂಲದ ಸಹ ಭಾರತೀಯ ಆಟಗಾರ್ತಿ ಕೊನೆರು ಹಂಪಿ ಅವರನ್ನು ಟೈ ಬ್ರೇಕರ್ನಲ್ಲಿ (1.5-0.5) ಸೋಲಿಸಿದರು.ಇದಕ್ಕೂ ಮೊದಲು ಶನಿವಾರ ಮತ್ತು ಭಾನುವಾರ ನಡೆದ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದವು.

ವಿಜೇತರನ್ನು ನಿರ್ಧರಿಸುವ ಎರಡನೇ ಪಂದ್ಯವೂ ಡ್ರಾ ಆಗಿದ್ದರಿಂದ ಪಂದ್ಯವು ಟೈಬ್ರೇಕರ್ಗೆ ಹೋಯಿತು. ಟೈಬ್ರೇಕರ್ನಲ್ಲಿ ನಡೆದ ಮೊದಲ ರ್ಯಾಪಿಡ್ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು.

ಎರಡನೇ ಪಂದ್ಯದಲ್ಲಿ ಕಪ್ಪು ಕಾಯಿಗಳೊಂದಿಗೆ ಆಟವಾಡಿ ದಿವ್ಯಾ ಕೊನೆರು ಹಂಪಿ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದರು. ಇದರೊಂದಿಗೆ ದಿವ್ಯಾ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗೆದ್ದ ನಾಲ್ಕನೇ ಭಾರತೀಯ ಮಹಿಳೆಯಾಗಿದ್ದಾರೆ.FIDE ಮಹಿಳಾ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ,ಇದರ ಪರಿಣಾಮವಾಗಿ ಅವರು ನೇರವಾಗಿ ಗ್ರ್ಯಾಂಡ್ಮಾಸ್ಟರ್ ಪ್ರಶಸ್ತಿಯನ್ನು ಪಡೆದರು.

ಪಂದ್ಯಾವಳಿಯಲ್ಲಿ ಗೆದ್ದ ದಿವ್ಯಾ 50,000 ಅಮೆರಿಕನ್ ಡಾಲರ್ (ಸುಮಾರು ರೂ. 43 ಲಕ್ಷ) ಬಹುಮಾನ ಮೊತ್ತವನ್ನು ಪಡೆಯಲಿದ್ದಾರೆ. ಹಂಪಿ, ದ್ರೋಣವಲ್ಲಿ ಹರಿಕಾ ಮತ್ತು ಆರ್. ವೈಶಾಲಿ ನಂತರ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗಳಿಸಿದ ನಾಲ್ಕನೇ ಭಾರತೀಯ ಮಹಿಳೆ ದಿವ್ಯಾ ದೇಶ್ ಮುಖ್ ಆಗಿದ್ದಾರೆ

ಇದರೊಂದಿಗೆ, ಮುಂದಿನ ವರ್ಷದ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ನಲ್ಲಿ ಭಾಗವಹಿಸಲು ದಿವ್ಯಾ ಅರ್ಹತೆ ಪಡೆದಿದ್ದಾರೆ, ಇದು ಮಹಿಳಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚೀನಾದ ಜು ವೆಂಜುನ್ ಅವರನ್ನು ಯಾರು ಎದುರಿಸುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ.





