ಮಂಗಳೂರು :ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಡೆಸಲು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ SIT ತಂಡವನ್ನು ರಚಿಸಿದ್ದು ಈ ತಂಡದ ಮುಂದಾಳತ್ವವನ್ನು ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಅವರನ್ನು ನೇಮಕ ಮಾಡಿದ್ದಾರೆ. ಸರಕಾರದ ಈ ನಡೆಗೆ ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಅಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಪ್ರಣಬ್ ಮೊಹಾಂತಿಯವರನ್ನು SITಯ ಮುಖ್ಯಸ್ಥರಾಗಿ ನೇಮಿಸುವ ಕುರಿತು ಮಾನ್ಯ ಘನ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 8403/2025ನ್ನು ಉಲ್ಲೇಖಿಸಲಾಗುತ್ತಿದೆ. ಈ ರಿಟ್ ಅರ್ಜಿಯು ಸೈಬರ್ ಕ್ರೈಮ್ (Data, Theft, fraud) ಕುರಿತಾದುದಾಗಿದೆ ಮತ್ತು ಆ ಅವಧಿಯಲ್ಲಿ ಪ್ರಣಬ್ ಮೊಹಾಂತಿಯವರು CIDಯ Cyber Economics ಮತ್ತು Narcoticsನ (CEN) ADGPಯಾಗಿದ್ದುದರಿಂದ ಅವರ ನೇತೃತ್ವದಲ್ಲೇ SIT ರಚಿಸಲು ಆದೇಶ ಮಾಡಲಾಗಿದೆ.ಮಾತ್ರವಲ್ಲದೆ ಪ್ರಣಬ್ ಮೊಹಾಂತಿಯವರ ವಿದ್ಯಾಭ್ಯಾಸವು B.E., M.S in Computer Science, PhD ಹಾಗೂ Certified Forensic Computer Examiner ಆಗಿರುತ್ತಾರೆ. ಇವೆಲ್ಲವನ್ನು ಗಮನಿಸಿದಾಗ, ಇವರ ನೈಪುಣ್ಯತೆಯು Cyber Crime ಆಗಿದೆಯೇ ವಿನಃ ಅತ್ಯಾಚಾರ ಮತ್ತು ನರಹತ್ಯೆ ಕುರಿತಾದ ತನಿಖೆಗೆ ಇವರು ಸೂಕ್ತ ವ್ಯಕ್ತಿಯಲ್ಲ ಎಂದು ಪೋಲಿಸರೇ ಹೇಳುತ್ತಿದ್ದಾರೆ ಎಂದು ಅನುಪಮ ಶೆಣೈ ಹೇಳಿದರು.

ಈ SIT ತಂಡದಲ್ಲಿ ಒಟ್ಟು 20 KSP ಅಧಿಕಾರಿಗಳು,ಮತ್ತು 4 IPS ಅಧಿಕಾರಿಗಳಿದ್ದಾರೆ. IPS ಅಧಿಕಾರಿಗಳಲ್ಲಿ ಅನುಚೇತ್ ಎಂ.ಎನ್. ಮತ್ತು ಡಾ.ಸೌಮ್ಯಲತರವರು ಕನ್ನಡಿಗರು ಅಲ್ಲದೆ ಉಳಿದ 20 KSP ಅಧಿಕಾರಿಗಳೂ ಸಹ ಕನ್ನಡಿಗರು.ಈ ಕನ್ನಡಿಗ ಅಧಿಕಾರಿಗಳ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಈಗ ಚರ್ಚೆಯಾಗುತ್ತಿದೆ.
ಈ ಹಿಂದೆ ಮಂಗಳೂರಿನ ಚರ್ಚ್ ಚರ್ಚ್ ಗಲಭೆಯ ರಾಜಕೀಯದಿಂದಾಗಿ ಡಿವೈಎಸ್ಪಿ ಎಂ.ಕೆ.ಗಣಪತಿಯವರು ಸಚಿವ ಕೆ.ಜೆ.ಜಾರ್ಜ್ರಿಂದಾಗಿ ಬಹಳಷ್ಟು ಕಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಾಗ ಡಿವೈಎಸ್ಪಿ ಗಣಪತಿಯವರು ಕೆ.ಜೆ.ಜಾರ್ಜ್ ಜತೆ ಐಪಿಎಸ್ ಅಧಿಕಾರಿ ಎ.ಎಂ.ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿಯವರ ಹೆಸರನ್ನೂ ಸಹ ಉಲ್ಲೇಖಿಸಿದ್ದರು. ಹೀಗಾಗಿ ಈ SIT ಮುಖಂಡರಾಗಿ ಪ್ರಣಬ್ ಮೊಹಾಂತಿಯವರ ನೇಮಕದಲ್ಲಿ ಕೆ.ಜೆ.ಜಾರ್ಜ್ರವರ ಕೈವಾಡ ಇದೆ ಅಲ್ಲದೆ ಈಗ 22 ಕನ್ನಡಿಗ ಅಧಿಕಾರಿಗಳ ನೇತೃತ್ವವನ್ನು ಪ್ರಣಬ್ ಮೊಹಾಂತಿಯವರಿಗೆ ನೀಡಿರುವುದರಿಂದ ಪೊಲೀಸ್ ಇಲಾಖೆಯ ಜಂಘಾಬಲವೇ ಉದುಗಿಹೋಗಿದೆ.

ಧರ್ಮಸ್ಥಳದ ಗೋರಿಗಳಿಂದ ಶವಗಳನ್ನು ಎತ್ತುವ ಕೆಲಸ ಮುಗಿದ ಬಳಿಕ ಫ್ಯಾನಿಗೆ ನೇಣು ಹಾಕಿಕೊಂಡು ಸಾಯಲಿರುವ ಪೊಲೀಸ್ ಅಧಿಕಾರಿಗಳ ಶವವನ್ನು ಇಳಿಸುವ ಕೆಲಸ ಶುರುವಾಗಲಿದೆಯೇ ಎಂದು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಸರಕಾರ ಈ ಕೂಡಲೆ ಪೊಲೀಸರ ಭಾವನೆಗೆ ಗೌರವ ಕೊಟ್ಟು ಪ್ರಣಬ್ ಮೊಹಾಂತಿಯವರ ನೇಮಕವನ್ನು ರದ್ದುಗೊಳಿಸಿ ಸುಳ್ಳು, ಆರೋಪಗಳಿಂದ ಬೇಸತ್ತು ರಜೆ ಹಾಕಿ ಮನೆಯಲ್ಲಿ ಕೂತಿರುವ ಡಾ.ಕೆ.ರಾಮಚಂದ್ರ ರಾವ್ ಅಥವಾ ಶ್ರೀ ದಯಾನಂದ್ರವರನ್ನು ಈ ಕೂಡಲೇ ಈ ತನಿಖಾ ತಂಡದ ಉಸ್ತುವಾರಿಯಾಗಿ ನೇಮಕ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಅನುಪಮ ಶೆಣೈ ಸರಕಾರವನ್ನು ಆಗ್ರಹಿಸಿದ್ದಾರೆ.

