ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾ.ಗಜಾನನ ಭಟ್ ಅವರಿದ್ದ ಬೆಂಗಳೂರಿನ ವಿಶೇಷ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ರೇವಣ್ಣ ಅವರಿಗೆ ಶನಿವಾರ ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಕೋರ್ಟ್ ದೋಷಿ ಎಂದು ತೀರ್ಪು ನೀಡುವ ವೇಳೆ ಪ್ರಜ್ವಲ್ ರೇವಣ್ಣ ಕಣ್ಣಿರಿಟ್ಟಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಕನಿಷ್ಠ 10 ವರ್ಷ, ಗರಿಷ್ಟ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ನಾಲ್ಕು ಅತ್ಯಾಚಾರ ಪ್ರಕರಣಗಳಲ್ಲಿ ಮೊದಲನೆಯದರಲ್ಲಿ ತೀರ್ಪು ಬಂದಿದೆ.

ಹಾಸನದಲ್ಲಿರುವ ಪ್ರಜ್ವಲ್ ಕುಟುಂಬದ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಯ ದೂರಿನ ಮೇರೆಗೆ ದಾಖಲಾಗಿದ್ದ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ. ಪ್ರಕರಣದಲ್ಲಿ ಆಕೆಯ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಮತ್ತು ಆ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನ್ಯಾಯಾಲಯವು ಈ ಹಿಂದೆ ವಿಡಿಯೋ ದೃಶ್ಯಾವಳಿ ಸೇರಿದಂತೆ 26 ಸಾಕ್ಷ್ಯಗಳನ್ನು ಪರಿಶೀಲಿಸಿತ್ತು. ಪ್ರಜ್ವಲ್ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ದೃಶ್ಯಗಳು ಹೊರಬಂದ ನಂತರ ಮಹಿಳೆ ದೂರು ನೀಡಿ ಪೋಲಿಸರನ್ನು ಸಂಪರ್ಕಿಸಿದರು.

