ಬೆಂಗಳೂರು: 47 ವರ್ಷದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಲಾಗಿದೆ.
ಪ್ರಜ್ವಲ್ ವಿರುದ್ಧದ ಇನ್ನೂ ಮೂರು ಪ್ರಕರಣಗಳ ತೀರ್ಪು ಪ್ರಕಟವಾಗಿಲ್ಲ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಐಪಿಸಿ ಸೆಕ್ಷನ್ 376 (2) (K), 376 (2) (N) ಅಡಿಯಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ. ಅಲ್ಲದೇ 5 ಲಕ್ಷ ರೂ. ದಂಡವನ್ನೂ ನ್ಯಾಯಾಲಯ ವಿಧಿಸಿದೆ. ಸಂತ್ರಸ್ತೆಗೂ 11 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ರೇಪಿಸ್ಟ್ ಪ್ರಜ್ವಲ್ಗೆ ಜೀವನಪರ್ಯಂತ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.ಇದೀಗ ಆರೋಪಿ ಪ್ರಜ್ವಲ್ ರೇವಣ್ಣನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

2021 ರಲ್ಲಿ ಹಾಸನದ ಗನ್ನಿಕಾಡದಲ್ಲಿರುವ ಅತಿಥಿ ಗೃಹದಲ್ಲಿ ಮತ್ತು ಬೆಂಗಳೂರಿನ ಬಸವನಗುಡಿಯ ಪ್ರಜ್ವಲ್ ಮನೆಯಲ್ಲಿ ತನ್ನ ಮೇಲೆ ಎರಡು ಬಾರಿ ಅತ್ಯಾಚಾರ ನಡೆದಿದೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ಇದಲ್ಲದೆ, ಚಿತ್ರಹಿಂಸೆ ನೀಡುವ ದೃಶ್ಯಗಳನ್ನು ಪ್ರಜ್ವಲ್ ಚಿತ್ರೀಕರಿಸಿದ್ದಾರೆ ಎಂದು ಅವರ ದೂರಿನಲ್ಲಿ ತಿಳಿಸಲಾಗಿದೆ. ನಂತರ ಈ ದೃಶ್ಯಗಳು ಸೋರಿಕೆಯಾಗಿ ಸಾವಿರಾರು ಪೆನ್ ಡ್ರೈವ್ಗಳಲ್ಲಿ ಜನರನ್ನು ತಲುಪಿದವು. ವೀಡಿಯೊಗಳು ವೈರಲ್ ಆದ ನಂತರ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.

