ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆ ಸಂಬಂಧಿಸಿದಂತೆ ಹಿರಿಯ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ನಲ್ಲಿ ಬರೆದುಕೊಂಡಿರುವ ಪ್ರಕಾಶ್ ರೈ, ಪ್ರಜ್ವಲಿಸಲು ಸಹಕರಿಸಿದವರಿಗೆ ಶಿಕ್ಷೆಯಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
“ಪ್ರಜ್ವಲಿಸಲು ಸಹಕರಿಸಿದವರಿಗೆ ಶಿಕ್ಷೆಯಿಲ್ಲವೇ?” ಯುವರ್ ಆನರ್, ಪ್ರಜ್ವಲ್ ಮಾಡಿದ ಅಮಾನುಷ ಅಪರಾಧಗಳಿಗೇನೋ ತಕ್ಕ ಶಿಕ್ಷೆ ಆಗಿದೆ. ಆದರೆ ಆ ಅಪರಾಧಗಳನ್ನು ಗೊತ್ತಿದ್ದೂ ಮುಚ್ಚಿಟ್ಟ ಸಂತ್ರಸ್ತರನ್ನು ಹೆದರಿಸಿದ ಸಾಕ್ಷಿ ನಾಶ ಮಾಡಲು ಸಹಕರಿಸಿದ. ಹಾಲಿ, ಮಾಜಿಗಳಿಗೆ.. ಪ್ರಭಾವಿಗಳಿಗೆ ಶಿಕ್ಷೆಯಿಲ್ಲವೇ ಎಂದು ಪ್ರಕಾಶ್ ರೈ ಕೇಳಿದ್ದಾರೆ.

ಈ ಹಿಂದೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದರು. ನಮಗೆ 2 ಸಾವಿರ ಹೆಣ್ಣು ಮಕ್ಕಳು ಮುಖ್ಯ, ವಿಕೃತ ಕಾಮಿಯಲ್ಲ ಎಂದಿದ್ದರು. ಈ ಕೃತ್ಯ ಎಸಗಿದವನದ್ದು ಎಷ್ಟು ತಪ್ಪೋ? ಆ ಹೆಣ್ಣು ಮಕ್ಕಳ ವಿಡಿಯೋ ಹಂಚಿದವನೂ ಅಷ್ಟೇ ತಪ್ಪು ಮಾಡಿದ್ದಾನೆ. ರಾಜಕೀಯ ಏನೇ ಇದ್ದರೂ ಆ ಹೆಣ್ಣು ಮಕ್ಕಳ ಬಗ್ಗೆ ಸೂಕ್ಷ್ಮತೆ ಇರಬೇಕು, ಯೋಚನೆ ಮಾಡಬೇಕಿತ್ತು ಎಂದಿದ್ದರು.

ಅಲ್ಲದೆ ಈ ರೆಪಿಸ್ಟ್ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಲ್ಲ ಒತ್ತಡಗಳ ನಡುವೆಯೂ ಪ್ರಾಮಾಣಿಕವಾಗಿ ತನಿಖೆ ನಡೆಸಿದ ಎಸ್ಐಟಿ ತಂಡಕ್ಕೆ ಧನ್ಯವಾದಗಳು. ಪೋಲಿಸ್ ಅಧಿಕಾರಿಗಳಿಗೆ, ಈ ತೀರ್ಪನ್ನು ನೀಡಿರುವ ನ್ಯಾಯಮೂರ್ತಿಗಳಿಗೆ ಧನ್ಯವಾದಗಳು. ಧರ್ಮಸ್ಥಳದ ಪ್ರಕರಣದಲ್ಲೂ ಇದೇ ರೀತಿ ನ್ಯಾಯ ಗೆಲ್ಲುವಂತಾಗಲಿ ಎಂದು ಪ್ರಕಾಶ್ ರಾಜ್ ಆಶಿಸಿದ್ದಾರೆ.

