ಮುಂಬೈ ; ಮಹಾರಾಷ್ಟ್ರದ ನಾಗ್ಪುರ ಮೂಲದ ಮದುವೆ ವಂಚಕಿ ಸಮೀರಾ ಫಾತಿಮಾ ಕೊನೆಗೂ ಸಿಕ್ಕಿಬಿದ್ದಿದ್ದಾಳೆ.
35 ವರ್ಷದ ಸಮೀರಾ ತನ್ನ ಒಂಬತ್ತನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸರು ಆಕೆಯನ್ನು ನಾಗ್ಪುರದಲ್ಲಿ ಬಂಧಿಸಿದ್ದಾರೆ.
ಎಂಟು ಮಂದಿ ಪುರುಷರನ್ನು ಮದುವೆಯಾಗಿ ಬ್ಲಾಕ್ ಮೇಲ್ ಮಾಡಿ ಅವರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದು ಆಕೆ ವಂಚಿಸಿದ್ದಾಳೆ. ಫಾತಿಮಾ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿದ್ದು, ಆಕೆಗೆ 12 ವರ್ಷದ ಮಗುವಿದೆ.

ಸಮೀರಾ ಫಾತಿಮಾ ಮತ್ತು ಆಕೆಯ ಗ್ಯಾಂಗ್ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿವಾಹಿತ ಮತ್ತು ಶ್ರೀಮಂತ ವ್ಯಕ್ತಿಗಳಿಗೆ ವಂಚನೆ ಮಾಡುತ್ತಿದ್ದರು. ಮ್ಯಾಟ್ರಿಮೋನಿ ಸೈಟ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮದುವೆಗಳ ಜಾಹೀರಾತು ನೀಡಿ ತಾನು ವಿಧವೆ ಮತ್ತು ಎರಡನೇ ಮದುವೆಯಲ್ಲಿ ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡು ಜನರನ್ನು ಮದುವೆಗೆ ಆಕರ್ಷಿಸುತ್ತಿದ್ದಳು.

ತನ್ನ ಜೀವನದ ದುಃಖದ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ಹೆಚ್ಚಿನವರನ್ನು ಮದುವೆಗೆ ಒತ್ತಾಯಿಸಿ ಬಲೆಗೆ ಹಾಕುತ್ತಿದ್ದಳು. ಮದುವೆ ಪ್ರಸ್ತಾಪಗಳೊಂದಿಗೆ ತನ್ನ ಬಳಿಗೆ ಬಂದವರನ್ನು ತಾನು ವಿಚ್ಛೇದನ ಪಡೆದಿದ್ದೇನೆ ಮತ್ತು ಮಗುವಿನ ತಾಯಿ ಎಂದು ಹೇಳಿ ಮೋಸ ಮಾಡುತ್ತಿದ್ದಳು.
ಮದುವೆ ನೋಂದಣಿಯಾದ ನಂತರ,ಗಂಡನಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಗಂಡನೊಂದಿಗಿನ ಸಂಭಾಷಣೆಗಳನ್ನು ದಾಖಲಿಸಿಕೊಳ್ಳುತ್ತಿದ್ದಳು ನಂತರ ಲೈಂಗಿಕ ದೌರ್ಜನ್ಯ, ಕಿರುಕುಳ ಮುಂತಾದ ಆರೋಪ ಮಾಡಿ ತನ್ನ ಇಚ್ಛೆಯಂತೆ ನಡೆಯಲು ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು. ವಿವಾಹಿತ ಪುರುಷರ ವಿರುದ್ಧ ವ್ಯಭಿಚಾರ ಮತ್ತು ಕಿರುಕುಳದ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸುತ್ತಿದ್ದಳು. ಕೊನೆಗೆ ಪ್ರಕರಣವನ್ನು ಹಿಂಪಡೆಯಲು ಗಂಡನಿಂದಲೇ ಹಣ ಸುಲಿಗೆ ಮಾಡುತ್ತಿದ್ದಳು.

2024 ರಲ್ಲಿ ಗುಲಾಮ್ ಪಠಾಣ್ ಎಂಬ ವ್ಯಕ್ತಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು. 2022 ರಲ್ಲಿ ಫಾತಿಮಾ ಅವರನ್ನು ವಿವಾಹವಾದ ಗುಲಾಮ್, ಫಾತಿಮಾ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ತನ್ನಿಂದ 10 ಲಕ್ಷ ರೂ.ಗಳ ಚೆಕ್ ಪಡೆದಿದ್ದಾಳೆ ಎಂದು ತನ್ನ ದೂರಿನಲ್ಲಿ ಆರೋಪಿಸಿದ್ದರು. ಅವರ ದೂರಿನ ಆಧಾರದ ಮೇಲೆ, ಪೊಲೀಸರು ನಾಗ್ಪುರದ ಸಿವಿಲ್ ಲೈನ್ಸ್ನ ಡಾಲಿ ಕಿ ಟ್ಯಾಪ್ರಿಯಲ್ಲಿ ಫಾತಿಮಾ ಅವರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆಗ ಆಕೆ ಒಂಬತ್ತನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತನಿಖಾ ತಂಡವು ಮಹಿಳೆಯನ್ನು ಸಮೀರಾ ಫಾತಿಮಾ ಎಂದು ಗುರುತಿಸಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ಸಮೀರಾ ಫಾತಿಮಾ ಕಳೆದ 15 ವರ್ಷಗಳಿಂದ ಆಕೆ ಹಾಗೂ ಆಕೆಯ ತಂಡ ಹಲವಾರು ಶ್ರೀಮಂತ ಕುಳ, ಸರಕಾರಿ ಅಧಿಕಾರಿ ಹಾಗೂ ಉದ್ಯಮಿಗಳನ್ನು ಇಂತಹ ವಿವಾಹಗಳನ್ನು ಮಾಡುವ ಮೂಲಕ ವಂಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

