ಮ್ಯಾಂಚೆಸ್ಟರ್: ಪಾಕಿಸ್ತಾನದ ಬಾಲಕಿಯ ಮೇಲೆ ಅತ್ಯಾಚಾರದ ಎಸಗಿದ ಆರೋಪದ ಮೇಲೆ ಪಾಕಿಸ್ತಾನಿ ಕ್ರಿಕೆಟಿಗ ಹೈದರ್ ಅಲಿಯನ್ನು ಯುಕೆಯಲ್ಲಿ ಬಂಧಿಸಲಾಗಿದೆ. ಪಾಕಿಸ್ತಾನದ ಎ ತಂಡ (ಪಾಕಿಸ್ತಾನ್ ಶಾಹೀನ್ಸ್ ) ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಹೈದರ್ ಅಲಿಯನ್ನು ಬಂಧಿಸಿದ್ದರು.

ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಅವರ ಪಾಸ್ಪೋರ್ಟ್ ವಶಪಡಿಸಿಕೊಂಡು ಹೈದರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೈದರ್ ಆಲಿಯನ್ನು ಅಮಾನತುಗೊಳಿಸಿದ್ದರು.

ಆಗಸ್ಟ್ 3 ರಂದು ಯುಕೆಯ ಬೆಕೆನ್ಹ್ಯಾಮ್ ಮೈದಾನದಲ್ಲಿ ಎಂಸಿಎಸ್ಎಸಿ ತಂಡದ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಬಂಧನ ನಡೆದಿದೆ ಎಂದು ವರದಿಯಾಗಿದೆ. ದೂರುದಾರರು ಪಾಕಿಸ್ತಾನಿ ಮೂಲದ ಇಂಗ್ಲೆಂಡ್ ನಿವಾಸಿ ಹುಡುಗಿಯಾಗಿದ್ದಾಳೆ. ತಂಡವು ಜುಲೈ 17 ರಿಂದ ಆಗಸ್ಟ್ 6 ರವರೆಗೆ ಇಂಗ್ಲೆಂಡ್ ಪ್ರವಾಸ ಮಾಡಿತು. ಎರಡು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಿತ್ತು. ನಾಯಕನನ್ನು ಹೊರತುಪಡಿಸಿ ಈಗ ಎಲ್ಲಾ ಆಟಗಾರರು ಬುಧವಾರ ಪಾಕಿಸ್ತಾನಕ್ಕೆ ಮರಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ವಕ್ತಾರರು ತನಿಖೆಯ ಬಗ್ಗೆ ತಮಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.ಮತ್ತು ಅವರು ತನಿಖೆಗೆ ಸಹಕರಿಸುತ್ತಾರೆ. ಮಂಡಳಿಯು ಯುಕೆಯಲ್ಲಿಯೂ ತನ್ನದೇ ಆದ ತನಿಖೆಯನ್ನು ನಡೆಸುತ್ತದೆ. ಹೈದರ್ ಅಲಿ ಅವರ ಅಮಾನತು ತನಿಖೆಗೆ ಒಳಪಟ್ಟಿರುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.ಒಂದು ವೇಳೆ ಆರೋಪ ಸಾಬೀತಾದರೆ ಹೈದರ್ ಆಲಿ ನಾಲ್ಕರಿಂದ ಐದು ವರ್ಷಗಳ ಕಾಲ ಜೈಲುವಾಸ ಅನುಭವಿಸ ಬೇಕಾಗುತ್ತದೆ.

ಪಾಕಿಸ್ತಾನ ಪರ ಎರಡು ಏಕದಿನ ಮತ್ತು 35 ಟಿ20 ಪಂದ್ಯಗಳನ್ನು ಆಡಿರುವ ಹೈದರ್ ಅಲಿ, ಮಂಡಳಿಯಿಂದ ಶಿಸ್ತು ಕ್ರಮಕ್ಕೆ ಒಳಗಾಗಿದ್ದಾರೆ. 2021 ರಲ್ಲಿ ಅಬುಧಾಬಿಯಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಸಮಯದಲ್ಲಿ ಕೋವಿಡ್-19 ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಅಮಾನತು ಗೊಳಿಸಲಾಯಿತು. ಇದರ ನಂತರ ಅದೇ ವರ್ಷ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಅವರನ್ನು ತಂಡದಿಂದ ಹೊರಗಿಡಲಾಯಿತು.


